ಜಿಲ್ಲೆಯ ಚಿಗಟೇರಿ ಆಸ್ಪತ್ರೆಗೆ ಆರೋಗ್ಯ ಸಚಿವರಾದ
ಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹಾಗೂ
ಜನ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಸಿಸಿಟಿವಿಯಲ್ಲಿ ಕೋವಿಡ್ ವಾರ್ಡ್‍ಗಳ
ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ
ಮಾಹಿತಿ ಪಡೆದರು.
ಆರೋಗ್ಯ ಸಚಿವರು ಜಿಲ್ಲಾಧಿಕಾರಿಗಳನ್ನು ಕುರಿತು, ತಕ್ಷಣವೇ
ಜಿಲ್ಲೆಯಲ್ಲಿ ಅನಸ್ತೇಶಿಯಾ, ಮೆಡಿಸಿನ್, ಬಯೋಮೆಡಿಕಲ್ ಇಂಜಿನಿಯರಿಂಗ್ ಜತೆ
ಇತರೆ ವೈದ್ಯರ ಒಂದು ಕಮಿಟಿ ಮಾಡಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ
ನಿರ್ದಿಷ್ಟವಾಗಿ ಎಷ್ಟು ಆಕ್ಸಿಜನ್ ಬೇಕು ಎಂಬುದನ್ನು ಮಾಹಿತಿ ಕಲೆ ಹಾಕಿ
ಅಷ್ಟೇ ಆಕ್ಸಿಜನ್ ವ್ಯವಸ್ಥೆ ನೀಡಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ
ಆಕ್ಸಿಜನ್ ನೀಡಬಹುದು ಹಾಗೂ ಜಿಲ್ಲಾಡಳಿತದ ವತಿಯಿಂದ ಜ್ಯೂಡಿಶಿಯರ್
ಅಧಿಕಾರಿಯನ್ನು ನೇಮಕ ಮಾಡಬೇಕು. ಅವರು ಪ್ರತೀ
ಆಸ್ಪತ್ರೆಗಳಲ್ಲೂ ಬಳಕೆಯಾಗುವ ಆಕ್ಸಿಜನ್ ಮಾಹಿತಿಯನ್ನು ಕಲೆ
ಹಾಕಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿ, ನಮ್ಮ ಜಿಲ್ಲೆಗೆ ಒಬ್ಬ
ಡೆಡಿಕೇಟೆಡ್ ಬಯೋಮೆಡಿಕಲ್ ಇಂಜಿನಿಯರ್ ಬೇಕಾಗಿದ್ದು, ಈ ಕುರಿತು
ಹಲವು ಬಾರಿ ಮನವಿ ಮಾಡಿದ್ದೇವೆ ಎಂದರು. ಇದಕ್ಕೆ ಆರೋಗ್ಯ
ಸಚಿವರು ಪ್ರತಿಕ್ರಿಯಿಸಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಒಬ್ಬ
ಬಯೋಮೆಡಿಕಲ್ ಇಂಜಿನಿಯರ್ ಇರುತ್ತಾರೆ. ಅವರನ್ನು ಕರೆಸಿಕೊಂಡು
ಸಮರ್ಪಕವಾಗಿ ಕೆಲಸ ಮಾಡಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಈಗಾಗಲೇ ವಾರ್‍ರೂಂ ಮಾಡಿದ್ದು 6-7
ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ 20 ಮೊಬೈಲ್ ಗಳನ್ನು
ಕೊಡಿಸಲಾಗಿದೆ. ಅದರ ಮೂಲಕ ಕಾಂಟ್ಯಾಟ್ಸ್ ಟ್ರೇಸಿಂಗ್, ಬೆಡ್
ಮ್ಯಾನೆಜ್‍ಮೆಂಟ್ ಹೀಗೆ ಕೋವಿಡ್ ಗೆ ಸಂಬಂಧಿಸಿದಂತೆ ಎಲ್ಲಾ
ಮಾಹಿತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೂ ಕೋವಿಡ್
ಹೆಲ್ಪ್ ಲೈನ್ ನಂಬರ್ ನಮೂದಿಸಿದ್ದು ಸಾರ್ವಜನಿಕರು ಈ ನಂಬರ್ ಮೂಲಕ
ಬೆಡ್‍ಗಳನ್ನು ಕೇಳಿ ಪಡೆಯುತ್ತಾರೆ ಎಂದರು.
ಇದಕ್ಕೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ವಾರ್‍ರೂಂ ಗೆ 3
ಶಿಫ್ಟ್‍ಗಳನ್ನು ಮಾಡಿ, ಪ್ರತಿ ಶಿಫ್ಟ್ ಗೆ 50 ಜನರನ್ನು ನೇಮಿಸಬೇಕು.
ಇದಕ್ಕೆ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಿ.
ಹಾಗೂ 4 ಸಂಖ್ಯೆಯುಳ್ಳ ಕೋವಿಡ್ ಹೆಲ್ಪ್‍ಲೈನ್ ನಂಬರ್ ಅನ್ನು ಕ್ಲೌಡ್
ಕನೆಕ್ಟ್ ಮಾಡಿ ಸಾರ್ವಜನಿಕರಿಗೆ ತಲುಪಿಸಬೇಕು ಎಂದ ಅವರು,
ಜಿಲ್ಲೆಯಲ್ಲಿ 4800 ಸಕ್ರಿಯ ಪ್ರಕರಣಗಳಿದ್ದು, 3259 ಮಂದಿ
ಹೋಮ್ ಐಸೋಲೇಶನ್‍ನಲ್ಲಿದ್ದಾರೆ. ಕೊರೊನಾ ಸೋಂಕಿತರಿಗೆ
ಹೋಮ್ ಐಸೋಲೇಶನ್ ನೀಡದೆ ಕಡ್ಡಾಯವಾಗಿ ಕೋವಿಡ್ ಕೇರ್
ಸೆಂಟರ್‍ಗೆ ಸೇರಿಸಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ.
ಇದು ಸಾಧ್ಯವಾದಾಗ ಮಾತ್ರ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯ.
ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ಬರುವುದನ್ನು ನಿರ್ಲಕ್ಷಿಸಿದರೆ
ಅಂತಹವರಿಗೆ ಪೊಲೀಸರ ಸಹಾಯದ ಮೇರಗೆ ಕೇರ್ ಸೆಂಟರ್ ಗೆ
ಕರೆದುಕೊಂಡು ಬರಬೇಕು. ಪ್ರಸ್ತುತ ಮನೆಯಲ್ಲೇ
ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು
ಕೋವಿಡ್ ಕೇರ್ ಸೆಂಟರ್‍ಗೆ ಕರೆತರಲು ಎಷ್ಟು ದಿನ ಬೇಕಾಗಬಹುದು
ಎಂದು ಪ್ರಶ್ನಿಸಿದರು.
ಅದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಅನಕ್ಷರಸ್ಥರಿಗಿಂತ
ಹೆಚ್ಚಾಗಿ ಅಕ್ಷರಸ್ತರೇ ಕೋವಿಡ್ ಮಾರ್ಗಸೂಚಿಗಳನ್ನು
ಪಾಲಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಲು
ಬೇಕಾದ ಸವಲತ್ತುಗಳಿಲ್ಲ. ಅಂತಹವರನ್ನು ಕೇರ್ ಸೆಂಟರ್‍ಗೆ
ಕರೆತರುತ್ತಿದ್ದೇವೆ. ಆದರೆ ನಗರಗಳಲ್ಲಿ ಮನೆಯಲ್ಲೇ
ಪ್ರತ್ಯೇಕ ಕೋಣೆ ಇದೆ ಎಂದು ಚಿಕಿತ್ಸೆ ಪಡೆಯುತ್ತಿರುವವರ
ಮನೆಯಲ್ಲೇ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂದರು.
ಆರೋಗ್ಯ ಸಚಿವರು ಪ್ರತಿಕ್ರಿಯಿಸಿ ಯಾರೆ ಆದರು ಯಾರಿಗೂ
ರಿಯಾಯಿತಿ ನೀಡದೆ ಕೋವಿಡ್ ಪಾಸಿಟಿವ್ ಬಂದರೆ ಅಂತಹವರನ್ನು ಕೋವಿಡ್
ಕೇರ್ ಸೆಂಟರ್‍ಗೆ ದಾಖಲಿಸಬೇಕು. ಸೋಂಕು ದೃಢಪಟ್ಟ 5
ತಾಸಿನೊಳಗಾಗಿ ಅವರಿಗೆ ಕೋವಿಡ್ ಕಿಟ್ ಒದಗಿಸಬೇಕು. ಸ್ಥಳೀಯ ಟಾಸ್ಕ್
ಫೋರ್ಸ್ ಸಮಿತಿಯಲ್ಲಿ ಸ್ಯಾಚ್ಯುರೇಷನ್ ರೆಕಾರ್ಡ್ ಮಾಡುತ್ತಿಲ್ಲ.
ಹಾಗೂ ಮನೆಯಲ್ಲೇ ಪ್ರತ್ಯೇಕವಾಗಿರುವವರನ್ನು
ವಿಚಾರಿಸುತ್ತಿಲ್ಲ. ಇದರಿಂದ ಸೋಂಕು ಹೆಚ್ಚಾಗಿ ಕೊನೆ ಹಂತ ತಲುಪಿ ಚಿಕಿತ್ಸೆ
ಫಲಕಾರಿಯಾಗದೆ ಮೃತರಾಗುತ್ತಿದ್ದಾರೆ. ಇಂತಹವುದಕ್ಕೆ
ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ
ಹಾಸಿಗೆಗಳ ಸಮಸ್ಯೆ ನೀಗಿಸಲು ಖಾಸಗಿ ಆಸ್ಪತ್ರೆಗಳು ಶೇ.75 ರಷ್ಟು
ಬೆಡ್‍ಗಳನ್ನು ನೀಡಬೇಕು. ಖಾಸಗಿ ಆಸ್ಪತ್ರೆಯವರು ಸುಮ್ಮನೆ
ಬೆಡ್‍ಗಳನ್ನು ಬಿಟ್ಟುಕೊಡುವುದು ಬೇಡ. ಸರ್ಕಾರಿ ನೋಂದಾಯಿತ
ಚಿಕಿತ್ಸೆಗೆ ಟ್ರಸ್ಟ್ ವತಿಯಿಂದ ಹಣ ಪಾವತಿಸಲಾಗುತ್ತಿದೆ. ಖಾಸಗಿ
ಆಸ್ಪತ್ರೆಗಳು ಸರ್ಕಾರದ ಆದೇಶದಂತೆ ನಡೆದುಕೊಳ್ಳದೆ
ಇದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕ್ರಮವನ್ನು
ತೆಗೆದುಕೊಳ್ಳಲಾಗುವುದು. ಇದನ್ನು ಜಿಲ್ಲೆಯ ಡಿಹೆಚ್‍ಒ ಹಾಗೂ
ಜಿಲ್ಲಾಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಹಾಸಿಗೆಗಳನ್ನು
ಪಡೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮಗಳ ಮೇಲೆ ಕ್ರಮ
ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ,
ಸಂಸದರಾದ ಜಿ.ಎಂ.ಸಿದ್ದೇಶ್ವರ್, ಮಾಯಕೊಂಡ ಶಾಸಕ
ಪ್ರೊ.ಲಿಂಗಣ್ಣ, ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್,ಸಿಇಒ
ವಿಜಯ ಮಹಾಂತೇಶ ದಾನಮ್ಮನವರ್, ಎಸಿ ಮಮತ ಹೊಸಗೌಡರ್,
ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಹಾಗೂ ಆರೋಗ್ಯ
ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.