ಲಾಕ್‍ಡೌನ್ ಮುಂದೂಡಲಾಗಿದೆ
ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ಕೋವಿಡ್ ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು,
ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು,
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು
ನಿಬಂಧನೆಗಳನ್ನು ಒಳಪಡಿಸಿ, ಮೇ.24 ರ ಬೆಳಿಗ್ಗೆ 10 ಗಂಟೆಯಿಂದ
ಮೇ.31 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ
ಲಾಕ್‍ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ
ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪ್ರಗತಿ
ಪರಿಶೀಲನಾ ಸಭೆಯನ್ನು ನಡೆಸಲಾಗಿದ್ದು, ಪ್ರಸ್ತುತ ಕೋವಿಡ್-19
ಪರಿಸ್ಥಿತಿಯನ್ನು ಪರಿಗಣಿಸಿ ಪುನರಾವಲೋಕನ ಮಾಡಿದ
ಹಿನ್ನೆಲೆಯಲ್ಲಿ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಸರ್ಕಾರದ
ನಿರ್ದೇಶನದಂತೆ ಹೆಚ್ಚುವರಿಯಾಗಿ ನಿಯಂತ್ರಣ ಕ್ರಮಗಳನ್ನು
ಕೈಗೊಳ್ಳಲಾಗಿದೆ.
ಈ ಆದೇಶದ ಅನ್ವಯ, ಎಲ್ಲಾ ಅಂಗಡಿ
ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು
ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ
ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು
ಹೊಗಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ವಾಹನ
ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮದುವೆ ಸಮಾರಂಭಕ್ಕೆ
ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಕೇವಲ 10
ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮದುವೆಗಳಲ್ಲಿ
ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ
ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ಮೇ.31 ರ
ಬೆಳಿಗ್ಗೆ 6.00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಅಂತ್ಯಸಂಸ್ಕಾರ/ಶವ
ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು
ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್
ಪೋಸ್ಟ್‍ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ
ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ,
ಮೊಬೈಲ್ ಸಂಖ್ಯೆನ್ನು ಪಡೆದುಕೊಳ್ಳಲಾಗುವುದು ಹಾಗೂ ಹೊರ
ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ
ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.
ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ
ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆಗಳನ್ನು ಚೆಕ್
ಪೋಸ್ಟ್‍ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ
ಸಂಚಾರವನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು
ಸೇವೆಗಳ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ಕರ್ತವ್ಯ ನಿಮಿತ್ತ
ಓಡಾಟಕ್ಕೆ ಯಾವುದೆ ನಿರ್ಬಂಧವಿರುವುದಿಲ್ಲ. ಆದರೆ ಕಡ್ಡಾಯವಾಗಿ
ಗುರುತಿನ ಚೀಟಿಯನ್ನು ತಪಾಸಣಾ ಸಿಬ್ಬಂದಿಗಳಿಗೆ ತೋರಿಸಬೇಕು.
ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ.
ಕೃಷಿ ಅವಲಂಬಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು
ಅನುಮತಿಸಿದೆ ಹಾಗೂ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ,
ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು
ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತಕ್ಷಂಬಂಧಿತ
ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ
ಮತ್ತು ತತ್ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಹಾಗೂ
ಸಿಬ್ಬಂದಿಗಳು ಕೃಷಿ ಕೈಗಾರಿಕಾ ಸಂಸ್ಥೆಗಳು ನೀಡಿದ ಅರ್ಹ ಗುರುತಿನ
ಚೀಟಿ/ಅಧಿಕೃತ ಪತ್ರವನ್ನು ತೋರಿಸುವ ಮೂಲಕ
ಓಡಾಡುವುದಕ್ಕೆ ಅನುಮತಿಸಿದೆ.
ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ
ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ
ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು
ಸಂಬಂಧಿಸಿದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು
ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ವ್ಯಾಪಾರ ವಹಿವಾಟು ನಡೆಸಲು
ಅನುಮತಿಸಿದೆ.
ಕ್ಲಿನಿಕ್, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ
ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ
ದಾಖಲಾದ ವಿವರಗಳ ರುಜುವಾತಿನೊಂದಿಗೆ ಸಂಚರಿಸಲು
ಅನುಮತಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್‍ಗಳು, ಉಪಾಹಾರ ಗೃಹಗಳು ಪಾರ್ಸಲ್
ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ
ಅನುಮತಿ ಇದೆ. ಯಾವುದೇ ರೀತಿಯ ಪಾರ್ಸ್‍ಲ್‍ಗಳನ್ನು ಗ್ರಾಹಕರು
ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.
ಕೋವಿಡ್-19ಕ್ಕೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ
ಕಛೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರದ
ಆದೇಶ ಸಂಖ್ಯೆ ಆರ್‍ಡಿ/158/ಟಿಎನ್‍ಆರ್/2020 ದಿ.07.05.2021ರಂತೆ
ಕಾರ್ಯನಿರ್ವಹಿಸಬೇಕು. ಆದರೆ, ಈ ಕಛೇರಿಗಳಿಗೆ ಸಾರ್ವಜನಿಕರ
ಭೇಟಿಯನ್ನು ನಿರ್ಬಂಧಿಸಲಾಗಿದೆ.
ಜಿಲ್ಲೆಯಲ್ಲಿ ಕಛೇರಿ ವೇಳೆಯನ್ನು ಮೀರಿ ತಮ್ಮ ಕರ್ತವ್ಯಗಳಿಗೆ
ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ
ನ್ಯಾಯಾಂಗದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಅಧಿಕೃತ ಗುರುತಿನ
ಚೀಟಿಯನ್ನು ತೋರಿಸಿ ಸಂಚರಿಸುವುದಕ್ಕೆ ಅನುಮತಿಸಿದೆ.
ಭಾರತ ಸರ್ಕಾರದ, ಅದರ ಸ್ವಾಯತ್ತ/ಅಧೀನ ಸಂಸ್ಥೆಗಳ
ಮತ್ತು ಸಾರ್ವಜನಿಕ ನಿಗಮಗಳ ಕಚೇರಿಗಳಾದ ದೂರಸಂಪರ್ಕ,
ಅಂಚೆ ಕಚೇರಿ, ಬ್ಯಾಂಕುಗಳು, ಆರ್‍ಬಿಐ ನಿಯಂತ್ರಿಕ ಹಣಕಾಸು
ಸಂಸ್ಥೆಗಳು, ರೈಲ್ವೇ ಮತ್ತು ತತ್ಸಂಬಂಧಿತ
ಕಾರ್ಯಚಾರಣೆಗಳು ಕೆಲವು ಸಿಬ್ಬಂದಿಗಳೊಂದಿಗೆ ಮಾತ್ರ
ಕಾರ್ಯನಿರ್ವಹಿಸತಕ್ಕದ್ದು.
ಸರ್ಕಾರದ ಆದೇಶದ ಪ್ರಕಾರ ಸರ್ಕಾರೇತರ ಸಂಸ್ಥೆಗಳ
ಕಛೇರಿಗಳು, ಇತರೆ ಎಲ್ಲಾ ಕಛೇರಿಗಳ ಸಿಬ್ಬಂದಿಗಳು
ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ತುರ್ತು ಸೇವೆಗಳಿಗೆ
ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ, ಅರೆ
ಸರ್ಕಾರಿ ಮತ್ತು ಖಾಸಗಿ ಕಛೇರಿಗಳ ಎಲ್ಲಾ ಅಧಿಕಾರಿಗಳು ಮತ್ತು
ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು.
ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆ
ಅಂಗಡಿಗಳು ಮಾತ್ರ ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ ಬೆ.10.00
ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ. ಔಷಧಿ
ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಅಗ್ನಿಶಾಮಕ
ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್,
ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ನೀರು, ನೈರ್ಮಲ್ಯ
ಸೇವೆಗಳಿಗೆ ಅನುಮತಿಸಲಾಗಿದೆ.
ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅಧಿಕೃತ
ಪ್ರಯಾಣ ದಸ್ತಾವೇಜುಗಳು/ಟಿಕೆಟ್‍ಗಳನ್ನು ತೋರಿಸಿದರೆ
ಮಾತ್ರ ಸಂಚರಿಸಲು ಅನುಮತಿಸಿದೆ. ಪಡಿತರ ನ್ಯಾಯಬೆಲೆ
ಅಂಗಡಿಗಳು ತೆರೆಯಲು ಕೊಪನ್ ವ್ಯವಸ್ಥೆಯಿಂದ ಜನ ಗುಂಪು
ಸೇರದಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ
ಷರತ್ತಿಗೊಳಪಟ್ಟು ಅನುಮತಿಸಲಾಗಿದೆ.
ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿಸಲಾಗಿದೆ. ದಿನಪತ್ರಿಕೆ,
ದೃಶ್ಯಮಾಧ್ಯಮಗಳ ಸೇವೆಗಳಿಗೆ ಅನುಮತಿಸಲಾಗಿದೆ. ಎಲ್ಲಾ
ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ
ಅನುಮತಿಸಲಾಗಿದೆ, ವಿಶೇಷವಾಗಿ ಅಮ್ಲಜನಕ ತರುವ
ವಾಹನಗಳನ್ನು ತಡೆರಹಿತ ಸಾಗಾಟವನ್ನು ಅನುಮತಿಸಲಾಗಿದೆ.
ನಿರ್ಗತಿಕರ ಕೇಂದ್ರ, ವೃದ್ದಾಶ್ರಮ, ಬಾಲಮಂದಿರ, ಬಾಲಾಶ್ರಮ,
ಅನಾಥಶ್ರಮ ಇವುಗಳಿಗೆ ಅನುಮತಿ ಇದೆ. ಅಂತರ ರಾಜ್ಯ ಮತ್ತು
ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಸರ್ಕಾರದ ಆದೇಶದಂತೆ
ಅನುಮತಿ ಇದೆ. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್
ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ
ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು
ಅನುಮತಿ ನೀಡಲಾಗಿದೆ. ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ
ಪ್ರದೇಶಗಳಲ್ಲಿ ಆಯುಕ್ತರು, ಮಹಾನಗರಪಾಲಿಕೆ ಮತ್ತು
ಸಂಬಂಧಪಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ
ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು
ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅನುಮತಿ ಕಲ್ಪಿಸಲಾಗಿದೆ.
ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು
ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು
ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಎಲ್ಲಾ ರೀತಿಯ
ಮದ್ಯದಂಗಡಿಗಳನ್ನು ಮತ್ತು ಬಾರ್‍ಗಳನ್ನು ಈ ಅವಧಿಯಲ್ಲಿ
ನಿಷೇಧಿಸಲಾಗಿರುತ್ತದೆ.
ಅಡುಗೆ ಅನಿಲ ಕಾರ್ಯನಿರ್ವಹಣೆಯನ್ನು ಮನೆ ಬಾಗಿಲಿಗೆ
ತಲುಪಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಣೆಯನ್ನು
ಅನುಮತಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು
ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ
ಬೇರೆಡೆ ಸಾಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು
ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು
ಅನುಮತಿಸಲಾಗಿದೆ. ಇ-ಕಾಮರ್ಸ್/ಹೋಮ್ ಡೆಲಿವರಿ ಸೇವೆಗಳ
ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು
ಅನುಮತಿಸಲಾಗಿದೆ.
ವಿನಾಯತಿ ನೀಡಿರುವ ಅಗತ್ಯ ಚಟುವಟಿಕೆಗಳಲ್ಲಿ ಕೋವಿಡ್-19ರ
ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
ನಿಗದಿಪಡಿಸಿದ ಮಾರ್ಗಸೂಚಿ ಅಥವಾ ನಿಬಂಧನೆಗಳನ್ನು ಉಲ್ಲಂಘಿಸುವ
ಯಾವುದೇ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005
ರ ವಿಭಾಗ 51 ರಿಂದ 60ರ ಅನ್ವಯ ಮತ್ತು ಐಪಿಸಿ ಸೆಕ್ಷನ್ 188 ರಂತೆ
ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆ, 2005ರ ವಿಭಾಗ 4, 5 ಮತ್ತು
10ರಂತೆ ಕ್ರಮ ಜರುಗಿಸಲಾಗುವುದು ಎಂದರು.