ರಾಜಕೀಯವೆನ್ನುವುದು ಶಿಷ್ಟ ಸಮಾಜವೊಂದರ ಆಡಳಿತ ಯಂತ್ರ. ಸಮಯಾಸಮಯದಲ್ಲಿ ತ್ರಿಗುಣ(ಸತ್ವ,ರಜ,ತಮೋ ಗುಣ) ಗಳ ವಿಧಾನಗಳನ್ನು ವಿನಿಯೋಗಿಸುವ ಒಂದು ಅದ್ಭುತ ಪ್ರಯೋಗಶಾಲೆ. ಸಾಮಾನ್ಯ ಸಮಯಗಳಲ್ಲಿ ಸಾತ್ವಿಕವಾದ ವರ್ತನೆ ಅನುಕರಣೀಯ. ಆಪತ್ಕಾಲದಲ್ಲಿ ರಜೋತ್ಕರ್ಷ ಅರ್ಥಾತ್ ಕ್ಷಾತ್ರಗುಣೋಪೇತವಾಗಿ ಆಡಳಿತ ಯಂತ್ರವನ್ನು ಪ್ರಯೋಗಿಸುವಲ್ಲಿ ದಾರ್ಷ್ಟ್ಯದಿಂದ ವರ್ತಿಸಬೇಕಾದುದು ಅನಿವಾರ್ಯವೆಂದು ತಿಳಿದ ಸರ್ಕಾರ ಶ್ರೇಷ್ಠ ಮಟ್ಟದ್ದಾಗಿರುತ್ತದೆ. ಶತೃರಾಷ್ಟ್ರಗಳ ತೀವ್ರತರ ಉಪಟಳ, ದೇಶೀಯರ ದಂಗೆ, ಉಗ್ರ ಚಟುವಟಿಕೆ, ಕ್ಷಾಮ, (pendamic) ದೇಶವ್ಯಾಪಿ ಸಾಂಕ್ರಾಮಿಕರೋಗ(ಅಂಟುಜಾಡ್ಯ) ಮುಂತಾದ ಇಕ್ಕಟ್ಟಿನ ಸಮಯಗಳು “ತುರ್ತು ಪರಿಸ್ಥಿತಿ” ಎಂದು ಘೋಷಿಸುವ ಕ್ರಮವಿದೆ.
ಪ್ರಸ್ತುತ ಕೊರೋನ ರೋಗವು ಭಾರತ ದೇಶವೂ ಸೇರಿದಂತೆ ಲೋಕವೆಲ್ಲ ಈ ಉಪದ್ರವದಿಂದ ಬಸವಳಿದಿರುವುದು ಶೋಚನೀಯ. ಈ ಸಂದಿಗ್ಧ ಪರಿಸ್ಥಿತಿ ಯಿಂದ ಕರ್ನಾಟಕ ಸಹ ದಯನೀಯ ಹಂತ ತಲುಪಿಯಾಗಿದೆ. ಸರಕಾರ ಹಾಗೂ ಆರೋಗ್ಯತಜ್ಞರ ಸಲಹೆಗಳಿಗೆ ಬಹುತೇಕ ಸರಕಾರೇತರ ಪಕ್ಷಗಳು ಅಡ್ಡಗಾಲು ಹಾಕುತ್ತಿರುವುದು ಹಾಗೂ ಪ್ರಜೆಗಳು ಕೂಡ ಬೇಜವಾಬ್ದಾರಿ ವರ್ತನೆ ಆತಂಕಕಾರಿಯಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಅತ್ಯಂತ ಅವಶ್ಯವಾದುದು. ಆದರೆ ಕೆಲ ಮಂದಮತಿಗಳ ಅಸಹಕಾರ ವನ್ನು ಹತ್ತಿಕ್ಕುವಲ್ಲಿ ಸರ್ಕಾರವು ನಿರ್ದಾಕ್ಷಿೃಣ್ಯ ಕ್ರಮವನ್ನನುಸರಿಸುವುದುಚಿತ.
ಏಕೆಂದರೆ ಸತ್ಪ್ರಜೆಗಳು ಒಂದು ವರ್ಷದಿಂದಲೂ ಮನೆಯಲ್ಲಿಯೇ ಸರಕಾರದ ನಿಯಮಗಳನ್ನು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಆದರೆ ತಿಕ್ಕಲು ಜನಗಳು ಅಷ್ಟೇ ಅಪ್ರಾಮಾಣಿಕ ನಡಾವಳಿಯಿಂದ ಕೊರೋನ ರೋಗದ ಭೀತಿಯಿಲ್ಲದೆ ಹರಡುವಲ್ಲಿ ಪ್ರಮುಖಪಾತ್ರಧಾರಿಗಳಾಗಿ ವಿಕೃತಿಯನ್ನು ಮೆರೆದಿದ್ದಾರೆ. ಇಂತಹವರ ಸಂಖ್ಯೆಯಲ್ಲಿ ಕಡಿಮೆಯೇನಿಲ್ಲ. ನಿರ್ದಾಕ್ಷಿಣ್ಯ ಕಾನೂನಿನ ಅನುಷ್ಠಾನವಾದಲ್ಲಿ ವಿರೋಧ ಪಕ್ಷಗಳು ಚುನಾವಣೆ ಸಮಯದಲ್ಲಿ ವೋಟ್ ಬ್ಯಾಂಕ್ ರಾಜಕೀಯ – ರೋಗ ಮಿತಿಮೀರಿದ ಸರಕಾರವು ಅಸಮರ್ಥವಾಗಿದೆಯೆಂದು ಇನ್ನೊಂದು ತರಹದ ರಾಜಕೀಯ. ಹೀಗೆ ಆಡಳಿತ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಮಜಾ ತೆಗೆದು ಕೊಳ್ಳುತ್ತಿದೆ. ಈ ಹಾಳು ಮಟ್ಟದ ರಾಜಕಾರಣಿಗಳು ಬೇರ್ಯಾವ ರಾಷ್ಟ್ರಗಳಲ್ಲೂ ಕಾಣಬರದೆ ಮನಃಪೂರ್ವಕವಾಗಿ ಆಡಳಿತ ಯಂತ್ರಕ್ಕೆ ಸಹಕರಿಸುತ್ತಿವೆ. ಈ ಎಲ್ಲ ವಿದ್ಯಮಾನಗಳ ಮುಂದಿನ ಬೆಳವಣಿಗೆಗಳಿಂದ ಆಡಳಿತ ಪಕ್ಷವು ಅತಂತ್ರವಾಗಿರುವುದು ಸ್ಪಷ್ಟ.
ಒಟ್ಟಿನಲ್ಲಿ ಪ್ರಜೆಗಳ ಬದುಕು ಹೈರಾಣವಾಗುವ ಸಾಧ್ಯತೆ ಹೆಚ್ಚಿದೆ.
ಈ ವಿಷಯದಲ್ಲಿ ಸರಕಾರವು ಮೊದಲಿಗೆ ಜನತಾ ಕರ್ಪ್ಯೂ, ಮುಖ್ಯರಸ್ತೆಗಳ ಬಂದ್, ಜನರ ದೈನಂದಿನ ವ್ಯವಹಾರದ ಅವಧಿಯನ್ನು ಮೊಟಕುಗೊಳಿಸುವುದು, ರಾತ್ರಿ ಕರ್ಪ್ಯೂ, ದಿನ ಕರ್ಪ್ಯೂ, ವಾಹನಗಳ ಜಪ್ತಿ ಹೀಗೆ ಅಷ್ಟಷ್ಟು ದಿನಕ್ಕೆ ಒಂದೊಂದಷ್ಟು ತಂತ್ರಗಳನ್ನು ಒಂದೆರೆಡು ತಿಂಗಳಲ್ಲ ಬರೋಬ್ಬರಿ ಒಂದು ವರ್ಷದಿಂದ ಪ್ರಯೋಗಿಸುತ್ತಿರುವುದು ವಿಚಿತ್ರವೆಸುತ್ತಿದೆ.
ಈ ಸಮಯದಲ್ಲಿ ಒಂದು ಕತೆ ನೆನಪಿಗೆ ಬರುತ್ತಿದೆ.
ಒಮ್ಮೆ ಕಳ್ಳನೊಬ್ಬ ಪ್ರಕರಣವೊಂದರಲ್ಲಿ ಪ್ರಖರವಾದ ಸಾಕ್ಷಿ ಸಮೇತ ಸಿಕ್ಕಿಬಿಡುತ್ತಾನೆ. ನ್ಯಾಯಪೀಠದಿಂದ ಶಿಕ್ಷೆಯನ್ನೂ ವಿಧಿಸಲಾಯಿತು. ಶಿಕ್ಷೆಯ ಸ್ವರೂಪ ಮೇಲ್ನೋಟಕ್ಕೆ ವಿಚಿತ್ರವಾಗಿತ್ತು. ಅದೆಂದರೆ ಶಿಕ್ಷೆಯ ಕ್ರಮ ಮೂರು ಆಯ್ಕೆ ಗಳಿಂದ ಕೂಡಿತ್ತು. ಮೊದಲನೆ ಆಯ್ಕೆ ನೂರು ಚಡಿ ಏಟು ಎರಡನೆಯದು ಹತ್ತು ಬರೆ ಹಾಕಿಸಿ ಕೊಳ್ಳುವುದು, ಮೂರನೆಯದು ಒಂದು ಸಾವಿರ ವರಾಹ ಗಳನ್ನು ರಾಜ ಬೊಕ್ಕಸಕ್ಕೆ ತೆರುವುದು.
ಕಳ್ಳನು ಯೋಚಿಸುತ್ತಾನೆ ಮೂರನೆಯ ಶಿಕ್ಷೆಯನ್ನು ಒಪ್ಪಿದರೆ ಇದುವರೆಗೆ ಹಗಲುರಾತ್ರಿ ಕನ್ನಹಾಕಿ, ಕಳ್ಳತನ ಮಾಡುವಾಗ ಪಟ್ಟಪಾಡು ವ್ಯರ್ಥವಾಗಿ ಹೋಗುವುದು, ಇನ್ನು ಎರಡನೆಯ ಆಯ್ಕೆ ‘ಬರೆ’ ಇದೂ ಕೂಡ ಕಲೆಯಾಗಿ ಆಜೀವ ಪರ್ಯಂತ ಉಳಿದು ಬಿಡುವುದು ಆದರೆ ನೂರು ಛಡೀ ಏಟು ಹೊಡೆತ ಬೀಳುವಾಗಷ್ಟೇ ನೋವು ನಂತರ ಕಲೆಯೂ ಉಳಿಯುವುದಿಲ್ಲ, ಗಳಿಸಿದ ಹಣವೂ ವ್ಯರ್ಥವಾಗುವುದಿಲ್ಲ. ಹಾಗಾಗಿ ತನಗೆ ಮೊದಲನೆ ಶಿಕ್ಷೆಯೇ ಆಗಬಹುದೆಂದು ಕೋರಿಕೊಂಡನು
ಶಿಕ್ಷೆ ಆರಂಭವಾಯಿತು ಎಂಟು-ಹತ್ತು ಏಟಿಗೆ ಹೈರಾಣಾಗಿ ಕಳ್ಳ ತತ್ ಕ್ಷಣ ಇದಾಗುವುದಿಲ್ಲ ಸಾಕು ನಿಲ್ಲಿಸಿ, ನಿಲ್ಲಿಸಿರೆಂದು ಗೋಗರೆದ ಭಟರು ಹೊಡೆಯುವುದನ್ನು ನಿಲ್ಲಿಸಿ ಏನೆಂದು ಕೇಳಿದರು ಕಳ್ಳ ಮಾರುತ್ತರವಾಗಿ ಈ ಶಿಕ್ಷೆಯ ಬದಲು ಬರೆ ಹಾಕಿರೆಂದು ಕೇಳಿದನು. ಸರಿ ಬರೆಯ ಶಿಕ್ಷೆಯ ನ್ನಾದರೂ ಪೂರೈಸಿದನೆ ಅದೂ ಇಲ್ಲ. ಮೂರ್ನಾಲ್ಕು ಬರೆಗೆ ಕುಸಿದು ಬಿದ್ದ. ಇದಾಗದಿದ್ದರೆ ನಾನು ಸಾವಿರ ವರಾಹವನ್ನೇ ಕಟ್ಟು ತ್ತೇನೆಂದು ಅಂಗಲಾಚಿ ನಿಂತ.
ಇದು ಈಗಿನ ಸರಕಾರದ ನೀತಿ ಕೊರೋನಾ ರೋಗಕ್ಕೆ ಯಾವುದೇ ಒಂದು ಕಟ್ಟುನಿಟ್ಟಾದ ನಿಯಮದಿಂದ ಕೆಲವಾರು ತಿಂಗಳಲ್ಲಿ ಮುಗಿಸಬಹುದಿದ್ದನ್ನು ಹಲವಾರು ಕ್ರಮಗಳಿಂದ ದೀರ್ಘಕಾಲದ ವರೆಗೆ ವ್ಯಾಪಿಸಿರುವುದು ಶೋಚನೀಯ.
“ದಂಡಂದಶಗುಣಂ ಭವೇತ್” ಇದು ಆರ್ಷವಾಣಿ. ಸರಕಾರದ ಲಕ್ಷ್ಯ “ಶಿಷ್ಟರಕ್ಷಣಂ ದುಷ್ಟಶಿಕ್ಷಣಂ” ಆಗಿರಬೇಕಿತ್ತು ದುರದೃಷ್ಟವಶಾತ್ ಆರಕ್ಷಕರು ಆರಂಭದಲ್ಲಿ ದಂಡ ಪ್ರಯೋಗದಿಂದ ಕೋವಿಡ್ ಹರಡುವಿಕೆಯಲ್ಲಿನ ತಡೆಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸರಕಾರವು ದುಷ್ಟರ ಮರ್ದನ ಕಾರ್ಯದಲ್ಲಿ ನಿರತರಾಗಿ ನಿಯಂತ್ರಣವನ್ನು ಸಾಧಿಸಿದ ಪೋಲೀಸರ ಕರ್ತವ್ಯಕ್ಕೆ ಚ್ಯುತಿಯನ್ನುಂಟು ಮಾಡಿತು. ಕಾರಣ ವಿರೋಧ ಪಕ್ಷಗಳು ಕೊರೋನ ಹೆಸರಲ್ಲಿ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ರಾಜಕಾರಣದ ಬತ್ತಳಿಕೆ ಯಿಂದ ನಿರಂತರವಾಗಿ ಟ್ರಂಪ್ ಕಾರ್ಡ್ ಗಳ ಪ್ರಯೋಗಕ್ಕೆ ಶುರುವಿಟ್ಟದ್ದು.
ಪರಿಣಾಮ ಕಳೆದ ಹತ್ತು ತಿಂಗಳ ಜನಸಾಮಾನ್ಯರ ಸಾಲು ಸಾಲು ಸಾವು. ಸಾವಿಲ್ಲದ ಕುಟುಂಬವೇ ಇಲ್ಲದಂತಾಗಿದೆ.
ಪ್ರಸ್ತುತ ಸರಕಾರವು ರಾಜಕಾರಣವನ್ನು ಮೀರಿ ನಿಂತು ತುರ್ತು ಶಾಸನವನ್ನು ವಿನಿಯೋಗಿಸಲೇ ಬೇಕಿರುವ ಸಮಯವಿದಾಗಿದೆ. ಈ ಸಂದರ್ಭದಲ್ಲಿ ಸರಕಾರವು ಕ್ಷಾತ್ರತೆಯಿಂದ ಮೆರೆದದ್ದೇ ಆದರೆ ನಿಮಗೆ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಸತ್ಪ್ರಜೆಗಳ ಬೆಂಬಲ ತಕ್ಕ ಸಮಯದಲ್ಲಿ ಕೃತಜ್ಞತಾ ಪೂರ್ವಕವಾಗಿ ನಿಮ್ಮಪರ ನಿಲ್ಲಲಿದೆ
Lekhakaru:
Dr. Nagabhushana H S
Guest Lecturer,
Samskruta Dept, Government First Grade College, Shivamigga.