ಕಡ್ಡಾಯ
ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು
ಹಿಂಜರಿಯಬೇಡಿ : ಪ್ರವೀಣ್ ನಾಯಕ್
ಕೋವಿಡ್-19 ಕೊರೋನಾ ಸೋಂಕು ತಡೆಗಟ್ಟಲು
ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆ
ಹಾಗೂ ವಿಕಲ ಚೇತನರ ಆರೈಕೆದಾರರಿಗೆ ಆದ್ಯತೆಯ
ಮೇರೆಗೆ ಕೋವಿಡ್-19 ಲಸಿಕೆ ನೀಡಲಾಗುತ್ತಿದ್ದು, ಅದರ
ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾನೂನು
ಸೇವಾ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಪ್ರವೀಣ್
ನಾಯಕ್ ತಿಳಿಸಿದರು.
ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು
ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ
ಇಲಾಖೆಯ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ, ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ
ವಿಕಲಚೇತನರಿಗೆ ಲಸಿಕೆ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ
ಮಾತನಾಡಿದರು.
ಉಚ್ಚನ್ಯಾಯಲದ ನ್ಯಾಯಧೀಶರಾದ ಕೆ.ಎನ್.ಫಣೀಂದ್ರ
ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಮಾನಸಿಕವಾಗಿ ಹಾಗೂ
ದೈಹಿಕವಾಗಿ ಅಂಗವಿಲತೆ ಹೊಂದಿರುವವರಿಗೆ ಕಾನೂನು ಸೇವಾ
ಪ್ರಾಧಿಕಾರದಿಂದ ಸಹಾಯ ಮಾಡುವಂತೆ ನಿರ್ದೇಶನ
ನೀಡಲಾಗಿದ್ದು, ಅದರಂತೆ ಎಲ್ಲಾ ವಿಕಲಚೇತನರಿಗೆ ಲಸಿಕೆ
ಹಾಕಿಸಿಕೊಳ್ಳಲು ಜಾಗೃತಿ ಅಭಿಯಾನವನ್ನು
ಹಮ್ಮಿಕೊಳ್ಳುತ್ತಿದ್ದೇವೆ.
ಸಾಮಾನ್ಯ ಜನರಿಗೆ ಕೊರೊನಾ ಸೋಂಕು ತಗುಲಿದರೆ
ಬೇಗ ಗುಣಮುಖರಾಗುತ್ತಾರೆ. ಆದರೆ ಅಂಗವಿಕಲರು
ಔಷಧಿಗಳನ್ನು ಪಡೆಯುತ್ತಿದ್ದು ಅವರಿಗೆ ಸೋಂಕು
ತಗುಲಿದರೆ ಜೀವಕ್ಕೆ ತೀವ್ರ ಹಾನಿ ಉಂಟಾಗುವ
ಸಂಭವವಿರುವುದರಿಂದ ವಿಕಲಚೇತನರು ತಡಮಾಡದೇ
ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು
ಕರೆ ನೀಡಿದರು.
ವಿಕಲಚೇತನರ ಆರೈಕೆದಾರರಿಗೂ ಲಸಿಕೆ
ನೀಡಲಾಗುತ್ತಿದ್ದು ಲಸಿಕಾ ಕೇಂದ್ರಕ್ಕೆ ಆಗಮಿಸುವಾಗ
ಕಡ್ಡಾಯವಾಗಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ನ್ನು
ತಪ್ಪದೇ ತರಬೇಕು. ಒಂದು ವೇಳೆ ಗುರುತಿನ ಚೀಟಿ
ಇಲ್ಲದವರು ಅನುಬಂಧ 4ನೇ ನಮೂನೆಯಡಿಯಲ್ಲಿ
ಹೆಸರನ್ನು ನೊಂದಯಿಸಿಕೊಂಡು ಲಸಿಕೆ ಪಡೆಯಬಹುದು
ಎಂದು ತಿಳಿಸಿದರು.
ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರು ಮತ್ತು
ಅವರ ಆರೈಕೆದಾರರು ಕಡ್ಡಾಯವಾಗಿ ಲಸಿಕೆ
ಹಾಕಿಸಿಕೊಳ್ಳಬೇಕು. ಒಂದು ವೇಳೆ ಲಸಿಕಾ ಕೇಂದ್ರಕ್ಕೆ
ಆಗಮಿಸಲು ಆಗದೆ ಇರುವಂತಹ ವಿಕಲಚೇತನರಿಗೆ ಮನೆ
ಬಾಗಿಲಿಗೆ ಬಂದು ಲಸಿಕೆಯನ್ನು ಹಾಕಲಾಗುವುದು. ಅಂತಹವರು
ಅಂಗವಿಕಲರ ಕಲ್ಯಾಣ ಇಲಾಖೆಯ ದೂರವಾಣಿ ಸಂಖ್ಯೆ 263939
ಅಥವಾ 263936 ಕ್ಕೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕು
ಎಂದು ಮಾಹಿತಿ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್
ಪ್ರಾಸ್ತವಿಕವಾಗಿ ಮಾತನಾಡಿ, ಅಂಗವೈಕಲ್ಯದಿಂದಾಗಿ
ಪ್ರಯಾಣಿಸಲು ಸಾಧ್ಯವಾಗದ ವ್ಯಕ್ತಿಗಳ ಪ್ರಕರಣಗಳಲ್ಲಿ
ಮನೆ ಬಾಗಿಲಿಗೆ ಲಸಿಕೆ ನೀಡಲಾಗುತ್ತದೆ. ಕೊರೊನಾ ಸೋಂಕು
ತಡೆಗಟ್ಟಲು ಹೈಕೋರ್ಟ್ ನಿರ್ದೇಶನದ ಮೆರೆಗೆ ರಾಜ್ಯ
ಸರ್ಕಾರವು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೋವಿಡ್-19
ನಿಗ್ರಹ ಲಸಿಕೆಯನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಯ
ಆವರಣದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ 100
ಜನರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುತ್ತಿದ್ದು, ಅದರ
ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ವಿಕಲಚೇತನರಿಗೆ ಲಸಿಕೆ ಪಡೆಯುವಲ್ಲಿ ಹಿಂಜರಿಕೆ ಇದ್ದು
ಮನೆಗೆ ಹೋಗಿ ತಿಳಿಸಿದರು ಸಹ ಲಸಿಕೆ ಹಾಕಿಸಿಕೊಳ್ಳಲು ಮುಂದೆ
ಬರುತ್ತಿಲ್ಲ. ಆದ್ದರಿಂದ ಪ್ರಧಾನ ಸತ್ರ ನ್ಯಾಯಧೀಶರ
ಆದೇಶದಂತೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಈ ಮೂಲಕ ಅರಿವು
ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ “ಕೋವಿಡ್-19 ಲಸಿಕೆ ಪಡೆದು ಜೀವ ಉಳಿಸಿ,
ವಿಕಲಚೇತನರೆ ಲಸಿಕೆ ಪಡೆಯಿರಿ, ವಿಕಲಚೇತನರೆ ಲಸಿಕೆ
ಪಡೆಯಲು ಹಿಂಜರಿಯಬೇಡಿ, ಕೋವಿಡ್ ಲಸಿಕೆ ಜೀವ ರಕ್ಷಕ ಲಸಿಕೆ
ಪಡೆಯಲು ಹಿಂಜರಿಯಬೇಡಿ” ಎಂಬಂತಹ ಘೋಷಣೆಗಳನ್ನು
ಕೂಗಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನಗರದ ಮಹಾನಗರಪಾಲಿಕೆಯ
ಮಂಜುನಾಥ್, ನಾಗರತ್ನ, ಸೌಮ್ಯ ಹಾಗೂ ಇಲಾಖೆಯ
ಸಿಬ್ಬಂದಿಗಳು ಪಾಲ್ಗೊಂಡಿದ್ದರು.