ಯೋಜನೆ
ಜಿಲ್ಲೆಯಲ್ಲಿ 4.90 ಲಕ್ಷ ಮಾನವ ದಿನ ಸೃಜನೆ : 16.18 ಕೋಟಿ
ರೂ. ಕೂಲಿ ಪಾವತಿ
ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)
ಉದ್ಯೋಗ ದೊರಕಿಸುವ ಮೂಲಕ ಕೂಲಿಕಾರರ ಕೈಹಿಡಿದಿದೆ.
ಜಿಲ್ಲೆಯಲ್ಲಿ ಈ ವರ್ಷ ಒಟ್ಟು 4.90 ಲಕ್ಷ ಮಾನವ ದಿನಗಳ
ಸೃಜನೆಯಾಗಿದ್ದು, 16.18 ಕೋಟಿ ರೂ. ಕೂಲಿ ಪಾವತಿಸಲಾಗಿದೆ.
ಜಿಲ್ಲೆಯಲ್ಲಿ ಮಹಿಳೆಯರಿಂದಲೇ ಅಧಿಕ ಮಾನವ ದಿನ
ಸೃಜನೆಯಾಗಿರುವುದು ವಿಶೇಷ.
ನರೇಗಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ಯಾಕೇಜ್
ಮಾದರಿಯಲ್ಲಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತಿದ್ದು,
ಗ್ರಾಮೀಣ ಭಾಗದ ಜನರು ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು
ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಕೋವಿಡ್-19
ಎರಡನೇ ಅಲೆಯಲ್ಲಿ ಹೆಚ್ಚು ಗ್ರಾಮಗಳಲ್ಲಿ ಸೋಂಕು
ಹರಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ
ಮುಂದೆ ಬಾರದಿರುವುದೂ ಸಹ ಕಂಡುಬಂದಿದೆ. ಈ ವರ್ಷ ಜಿಲ್ಲೆಯಲ್ಲಿ
48686 ಗ್ರಾಮೀಣರಿಗೆ ಉದ್ಯೋಗಖಾತ್ರಿಯಡಿ ಕೆಲಸ ನೀಡುವ ಮೂಲಕ
4.90 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ ಹೂಳೆತ್ತುವುದು,
ಗೋಕಟ್ಟೆ ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ
ಘಟಕ, ಮೈದಾನ, ಕಣ, ಚೆಕ್ ಡ್ಯಾಂ, ಹೊಲಗಳಿಗೆ ಹೋಗಲು ದಾರಿ, ಕೃಷಿ
ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ
ಅಭಿವೃದ್ಧಿ, ಉದ್ಯಾನ, ಕಾಂಕ್ರಿಟ್ ರಸ್ತೆ ನಿರ್ಮಾಣದಂತಹ
ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಬಹುದಾದ ಅನೇಕ
ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಗುಂಪುಗೂಡಿ
ಮಾಡಬಹುದಾದ ಕಾಮಗಾರಿ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣ
ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಕೂಲಿ ಕಾರ್ಮಿಕರು: ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಪ್ರಸ್ತುತ
ಉದ್ಯೋಗ ಖಾತ್ರಿಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರ ಸಂಖ್ಯೆ
ಕಡಿಮೆಯಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ 1,495 ಜನರು, ಹೊನ್ನಾಳಿ 792,
ದಾವಣಗೆರೆ 337, ಹರಿಹರ 210, ಜಗಳೂರು 151, ನ್ಯಾಮತಿ 166 ಸೇರಿದಂತೆ
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 3,151 ಜನರು ಮಾತ್ರ ಉದ್ಯೋಗಕ್ಕೆ
ಬರುತ್ತಿದ್ದಾರೆ. 15 ದಿನಗಳ ಹಿಂದೆ ಒಟ್ಟು 19,321 ಜನರು ಕೆಲಸಕ್ಕೆ
ಬರುತ್ತಿದ್ದು, ಕೋವಿಡ್ ಸೋಂಕಿನ ಭೀತಿಯ ಕಾರಣದಿಂದ ಉದ್ಯೋಗ
ಅರಸಿ ಬರುವವರ ಸಂಖ್ಯೆಯೂ ಸದ್ಯ ಕಡಿಮೆ ಇದೆ. ಬರುವ ದಿನಗಳಲ್ಲಿ
ಕೆಲಸ ಬಯಸಿ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.
ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ
ಜಿಲ್ಲಾದ್ಯಂತ ಪುರುಷರು ಮತ್ತು ಮಹಿಳೆಯರು ಗ್ರಾಮೀಣ
ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ನರೇಗಾ
ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವ
ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗ
ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,11,851 ಜಾಬ್‍ಕಾರ್ಡ್ ಗಳನ್ನು
ನೀಡಲಾಗಿದ್ದು, 2,26,985 ಮಹಿಳೆಯರು, 2,57,952 ಪುರುಷರು
ಸೇರಿದಂತೆ ಒಟ್ಟು 4,84,937 ಜನರು ಜಾಬ್‍ಕಾರ್ಡ್ ಪಡೆದುಕೊಂಡಿದ್ದಾರೆ.
ಅಲ್ಲದೇ ಏಪ್ರಿಲ್, ಮೇ ತಿಂಗಳಲ್ಲಿ 2280 ಹೊಸ ಜಾಬ್‍ಕಾರ್ಡ್‍ಗಳನ್ನು
ವಿತರಿಸಲಾಗಿದೆ.
ಮಹಿಳೆಯರಿಂದ ಹೆಚ್ಚು ಮಾನವ ದಿನ ಸೃಜನೆ: ಪ್ರಸ್ತುತ
ಶೇ.46.87ರಷ್ಟು ಮಹಿಳೆಯರು ನರೇಗಾ ಯೋಜನೆಯಡಿಯಲ್ಲಿ
ಉದ್ಯೋಗವಕಾಶವನ್ನು ಪಡೆದುಕೊಂಡಿದ್ದು, ಮಹಿಳೆಯರಿಂದಲೇ
ಹೆಚ್ಚು ಮಾನವ ದಿನಗಳು ಸೃಜನೆಯಾಗಿರುವುದು ವಿಶೇಷ.
ಜಿಲ್ಲೆಯಲ್ಲಿ ಒಟ್ಟು 48686 ಜನರಿಗೆ ನರೇಗದಡಿ ಕೆಲಸ ದೊರೆತಿದ್ದು ಒಟ್ಟು
490614 ಮಾನವದಿನಗಳ ಸೃಜನೆಯಾಗಿದ್ದು, 16.18 ಕೋಟಿ ರೂ.
ಮೊತ್ತ ಪಾವತಿಸಲಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 12362 ಜನ ಕೆಲಸ ಮಾಡಿದ್ದು, 138511
ಮಾನವದಿನಗಳ ಸೃಜನೆಯಾಗಿದೆ. ಇಲ್ಲಿ 4.73 ಕೋಟಿ ರೂ. ಕೂಲಿ
ಮೊತ್ತ ಪಾವತಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4495 ಜನ ಕೆಲಸ
ನಿರ್ವಹಿಸಿದ್ದು, 36020 ಮಾನವದಿನಗಳ ಸೃಜನೆಯಾಗಿ, 1.06 ಕೋಟಿ ರೂ.
ಕೂಲಿ ಪಾವತಿಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 2032 ಕೂಲಿಕಾರರು ಕೆಲಸ
ಮಾಡಿ 22015 ಮಾನವದಿನಗಳ ಸೃಜನೆಯಾಗಿದ್ದು 66.79 ಲಕ್ಷ ರೂ.
ಕೂಲಿ ಮೊತ್ತ ಪಾವತಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 8898 ಜನ ಕೆಲಸ
ಮಾಡಿ 121933 ಮಾನವದಿನಗಳ ಸೃಜನೆ ಮಾಡಿದ್ದು, 3.78 ಕೋಟಿ ರೂ.
ಮೊತ್ತ ಪಾವತಿಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ 16605 ಜನ ಕೆಲಸ
ಮಾಡಿ 126285 ಮಾನವದಿನಗಳನ್ನು ಸೃಜಿಸಿದ್ದು, 4.56 ಕೋಟಿ ರೂ.
ಪಾವತಿಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 4294 ಜನ ಕೂಲಿಕಾರರು 45850
ಮಾನವ ದಿನಗಳನ್ನು ಸೃಜಿಸಿದ್ದು, 1.36 ಕೋಟಿ ರೂ. ಪಾವತಿಯಾಗಿದೆ.
ಮಾನವ ದಿನಗಳ ಗುರಿ: ಕೋವಿಡ್ ಲಾಕ್‍ಡೌನ್ ಕಾರಣದಿಂದ ಉದ್ಯೋಗ
ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನರೇಗ ಯೋಜನೆ
ಆರ್ಥಿಕವಾಗಿ ಶಕ್ತಿ ತುಂಬಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ನರೇಗಾ
ಅಡಿಯಲ್ಲಿ 31 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿದ್ದು,
ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 4,90,614 ಮಾನವ ದಿನಗಳನ್ನು
ಸೃಷ್ಟಿ ಮಾಡಲಾಗಿದೆ. ಕಳೆದ ವರ್ಷ 40 ಲಕ್ಷ ಗುರಿ ನೀಡಿದ್ದು, ಒಟ್ಟು
34,10,305 ಮಾನವ ದಿನಗಳನ್ನು ಸೃಜಿಸಲಾಗಿತ್ತು.
ದಿನಗೂಲಿ ಹಾಗೂ ಆಕಸ್ಮಿಕ ಮರಣ ಹೊಂದಿದವರಿಗೆ ಪರಿಹಾರ: ನರೇಗಾದಡಿ
ಕೆಲಸ ಮಾಡುವವರಿಗೆ ದಿನಗೂಲಿ ರೂ.299 ನೀಡಲಾಗುತ್ತಿದ್ದು, ಲಾಕ್‍ಡೌನ್
ಅವಧಿಯಲ್ಲಿ ಬಹುತೇಕರಿಗೆ ಉದ್ಯೋಗ ಸೃಷ್ಟಿ ಮಾಡಿ ಬದುಕು
ರೂಪಿಸಿಕೊಡುವಲ್ಲಿ ಮುನ್ನಡೆದಿದೆ. ನರೇಗಾ ಯೋಜನೆಯ
ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾವುದೇ ಕಾರ್ಮಿಕರು
ಕೆಲಸದ ಕಾರಣದಿಂದಾಗಿ ಮತ್ತು ಕೆಲಸದ ಸಮಯದಲ್ಲಿ ಆಕಸ್ಮಿಕವಾಗಿ
ಮರಣ ಹೊಂದಿದಲ್ಲಿ ಅಥವಾ ಶಾಶ್ವತವಾಗಿ ಅಂಗವಿಕಲರಾದಲ್ಲಿ ಅಂತಹ
ಕಾರ್ಮಿಕರ ಅಧಿಕೃತ ವಾರಸುದಾರರಿಗೆ ಪ್ರಧಾನ ಮಂತ್ರಿ ಜೀವನ್
ಜ್ಯೋತಿ ಬೀಮಾ ಯೋಜನೆಯಡಿ ರೂ.2 ಲಕ್ಷ ಪರಿಹಾರ
ನೀಡಲಾಗುತ್ತಿದೆ.
ಕೋವಿಡ್ ಲಾಕ್‍ಡೌನ್ ಸಂಕಷ್ಟದ ಸಮಯದಲ್ಲಿ ಕೂಲಿಕಾರರಿಗೆ
ಸ್ಥಳೀಯವಾಗಿಯೇ ಉದ್ಯೋಗ ದೊರಕಿಸುವ ಮೂಲಕ ನರೇಗಾ
ಯೋಜನೆ ಆರ್ಥಿಕವಾಗಿ ಆಸರೆ ನೀಡಿದ್ದು, ಉದ್ಯೋಗಕ್ಕಾಗಿ ಗ್ರಾಮೀಣರು
ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳನ್ನು ಸಂಪರ್ಕಿಸಿ, ಹೆಚ್ಚು
ಹೆಚ್ಚು ಕೆಲಸ ಪಡೆಯಲು ಮುಂದಾಗಬೇಕಿದೆ ಎನ್ನುತ್ತಾರೆ ಜಿಲ್ಲಾ
ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಅವರು.