ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ ಅಧ್ಯಾತ್ಮಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದಶಾಸ್ತ್ರವಾಗಿದೆ. ಎಲ್ಲವೂ ಅನುಕೂಲಕರವಾಗಿದ್ದು ಧರ್ಮದಲ್ಲಿ ಹೇಳಿದಂತೆ ವರ್ತಿಸಬಹುದು, ಇದಕ್ಕೆ ‘ಸಂಪತ್ಕಾಲ’ ಎನ್ನಬಹುದು.
ಇಲ್ಲಿ ಮಹತ್ವವಾದ ಅಂಶವೇನೆಂದರೆ, ಹಿಂದೂ ಧರ್ಮವು ಆಪತ್ಕಾಲಕ್ಕಾಗಿ ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಅದನ್ನು ‘ಆಪದ್ಧರ್ಮ’ ಎಂದು ಹೇಳುತ್ತಾರೆ. ಆಪದ್ಧರ್ಮ ಅಂದರೆ ‘ಆಪದಿ ಕರ್ತವ್ಯೋ ಧರ್ಮಃ |’ ಅಂದರೆ ‘ವಿಪತ್ತಿನಲ್ಲಿ ಆಚರಣೆಯಲ್ಲಿ ತರುವಂತಹ ಧರ್ಮ’. ಸದ್ಯ ಕೊರೋನಾದ ಹಾವಳಿಯಿಂದಾಗಿ ದೇಶದಾದ್ಯಂತ ಸಂಚಾರ ನಿಷೇಧವಿದೆ. ಈ ಕಾಲದಲ್ಲಿಯೇ ಅಕ್ಷಯ ತೃತೀಯ ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ ಕೆಲವು ಧಾರ್ಮಿಕ ಕೃತಿಗಳು ಈ ಸಮಯದಲ್ಲಿ ಮಾಡಲು ಆಗುವುದಿಲ್ಲ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಏನೆಲ್ಲ ಮಾಡಬಹುದು, ಎಂಬುದರ ಬಗ್ಗೆ ವಿಚಾರವೂ ಮಾಡಲಾಗಿದೆ. ಇಲ್ಲಿ ಮಹತ್ವದ ಅಂಶವೇನೆಂದರೆ, ಹಿಂದೂ ಧರ್ಮವು ಮನುಷ್ಯನ ಬಗ್ಗೆ ಎಷ್ಟು ಆಳವಾದ ವಿಚಾರ ಮಾಡಿದೆ, ಎಂಬುದು ಕಲಿಯಲು ಸಿಗುತ್ತದೆ. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆಯು ಗಮನಕ್ಕೆ ಬರುತ್ತದೆ.

ತಿಥಿ : ವೈಶಾಖ ಶುಕ್ಲ ತೃತೀಯಾ

ಮಹತ್ವ :
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ |
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ |
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ |
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ || – ಮದನರತ್ನ

ಅರ್ಥ : (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದನ್ನು ‘ಅಕ್ಷಯ ತೃತೀಯಾ’ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ) ವಾಗುತ್ತದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ.

ಅಕ್ಷಯ ತೃತೀಯಾದಂದು ಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ. (ಆಧಾರ : ‘ಮದನರತ್ನ’)

ಹಬ್ಬವನ್ನು ಆಚರಿಸುವ ಪದ್ಧತಿ :
೧. ಸ್ನಾನದಾನಾದಿ ಧರ್ಮಕಾರ್ಯಗಳು : ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ‘ಸತ್ಪಾತ್ರೇ ದಾನ’ವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ‘ಸತ್ಪಾತ್ರೇ ದಾನ’ವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.
ಆಪದ್ಧರ್ಮ : ಕೊರೋನಾದ ಸೋಂಕಿನಿಂದಾಗಿ ಪ್ರಸ್ತುತ ನಾವು ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಆಪದ್ಧರ್ಮದ ಭಾಗವೆಂದು ಮುಂದಿನ ಕೃತಿಗಳನ್ನು ಮಾಡಬಹುದು. ನಾವು ಮನೆಯಲ್ಲೇ ಗಂಗೆಯ ಸ್ಮರಣೆಯನ್ನು ಮಾಡಿ ಸ್ನಾನ ಮಾಡಿದರೆ ನಮಗೆ ಗಂಗಾ ಸ್ನಾನದ ಲಾಭವು ಆಗುತ್ತದೆ. ಅದಕ್ಕಾಗಿ ಈ ಮುಂದಿನ ಶ್ಲೋಕವನ್ನು ಹೇಳಿ ಸ್ನಾನವನ್ನು ಮಾಡಬೇಕು. “ಗಂಗೇ ಚ ಯಮುನೆ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.”

ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.

ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ ?
ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್‌ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ.
ಆಪದ್ಧರ್ಮ : ಸತ್ಪಾತ್ರೇ ದಾನ – ಪ್ರಸ್ತುತ ವಿವಿಧ ಆನ್‌ಲೈನ್ ಸೌಲಭ್ಯಗಳು ಲಭ್ಯವಿದೆ. ಅದ್ದರಿಂದ ಅಧ್ಯಾತ್ಮಪ್ರಸಾರ ಮಾಡುವ ಸಂತರು ಅಥವಾ ಇಂತಹ ಸಂಸ್ಥೆಗಳಿಗೆ ನಾವು ಆನ್‌ಲೈನ್ ಅರ್ಪಣೆಯನ್ನು ನೀಡಬಹುದು. ಮನೆಯಿಂದಲೇ ಅರ್ಪಣೆಯನ್ನು ಮಾಡಬಹುದು.
ಆಪದ್ಧರ್ಮ : ಉದಕುಂಭದ ದಾನ – ಅಕ್ಷಯ ತೃತೀಯದ ದಿನ ಉದಕುಂಭ ದಾನವನ್ನು ಮಾಡಬೇಕು, ಎಂದು ಶಾಸ್ತ್ರವಿದೆ. ಈ ದಿನದಂದು ಈ ದಾನವನ್ನು ಮಾಡಲು ಹೊರಗೆ ಹೋಗಲು ಸಾಧ್ಯವಿಲ್ಲದ್ದರಿಂದ ಅಕ್ಷಯ ತೃತೀಯಾದ ದಿನವೇ ದಾನದ ಸಂಕಲ್ಪವನ್ನು ಮಾಡಬೇಕು, ಮತ್ತು ಸರಕಾರದ ನಿಯಮಕ್ಕನುಸಾರ ಯಾವಾಗ ಹೊರಗೆ ಹೋಗಲು ಸಾಧ್ಯವಾಗುವುದೋ, ಆಗಲೇ ದಾನವನ್ನು ಮಾಡಬೇಕು.

ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ ?
ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.

ಎಳ್ಳು ತರ್ಪಣೆ ಮಾಡುವ ಪದ್ಧತಿ : ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
ಆಪದ್ಧರ್ಮ : ಪಿತೃಗಳಿಗೆ ಪ್ರಾರ್ಥನೆಯನ್ನು ಮಾಡಿ ಮನೆಯಿಂದಲೇ ಪಿತೃತರ್ಪಣೆಯನ್ನು ಮಾಡಬಹುದು.
ಆಪದ್ಧರ್ಮ : ಕುಲಾಚಾರಕ್ಕನುಸಾರ ಅಕ್ಷಯ ತೃತೀಯ ಸಮಯದಲ್ಲಿ ಮಾಡಲಾಗುವ ಧಾರ್ಮಿಕ ಕೃತಿ. ಈ ಮೇಲಿನ ಕೃತಿಗಳನ್ನು ಹೊರತುಪಡಿಸಿ ಕುಲಕ್ಕನುಸಾರ ಅಕ್ಷಯ ತೃತೀಯಾದಂದು ನಾವು ಇತರ ಧಾರ್ಮಿಕ ಕೃತಿಗಳನ್ನು ಮಾಡುತ್ತಿದ್ದಲ್ಲಿ, ಅದು ಸರಕಾರದ ಸದ್ಯದ ನಿಯಮಕ್ಕನುಗುಣವಾಗಿ ಆಗುವುದೇ, ಎಂಬುದನ್ನು ನೋಡಬೇಕು. ಮೃತ್ತಿಕಾಪೂಜೆ, ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ ಮತ್ತು ಗಿಡಗಳನ್ನು ನೆಡುವುದು. ‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣ ಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ.

Leave a Reply

Your email address will not be published. Required fields are marked *