ಹೊನ್ನಾಳಿ ; ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಉತ್ಪಾದಕ ಘಟಕವನ್ನು ಸರ್ಕಾರ ಮಂಜೂರು ಮಾಡಿದ್ದು, ಸದ್ಯದಲ್ಲೇ ಆಸ್ಪತ್ರೆಯ ಆವರಣದಲ್ಲಿ ಘಟಕ ತಲೆ ಎತ್ತಲಿದೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿರುವ ಲಕಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿ ಕೋವ್ಯಾಕ್ಸಿನ್ ಕೊರತೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ದಾವಣಗೆರೆಯಿಂದ 150 ಕೋವ್ಯಾಕ್ಸಿನ್ ಲಸಿಕೆ ತರಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎರಡನೇ ಡೋಸ್ ಲಸಿಕೆ ನೀಡುವ ವ್ಯವಸ್ಥೆ ಮಾಡಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಮಾಡಲು ಸರ್ಕಾರ ಮಂಜೂರಾತಿ ನೀಡಿದ್ದು ಈಗಾಗಲೇ 82 ಲಕ್ಷ ಹಣ ಬಿಡುಗಡೆ ಯಾಗಿದ್ದು ಸದ್ಯದಲ್ಲೇ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ತಲೆ ಎತ್ತಲಿದೆ ಎಂದರು.
ಆಕ್ಸಿಜನ್ ಘಟಕದಿಂದ ನೂರು ಹಾಸಿಗೆಗೆ ಆಕ್ಸಿನ್ ಪೂರೈಕೆ ಮಾಡ ಬಹುದಾಗಿದ್ದು, ಇದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನರಿಗೆ ಸಂತೋಷದ ವಿಷಯ ಎಂದರು.
ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಹೊನ್ನಾಳಿ ತಾಲೂಕಿಗೆ ಆಕ್ಸಿಜನ್ ಘಟಕ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೆ,ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತ್ವರಿತವಾಗಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಮಂಜೂರು ನೀಡಿ ಹಣ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಗಳು ಹಾಗೂ ಕೆಆರ್‍ಡಿಎಲ್ ನ ಅಧ್ಯಕ್ಷ ರುದ್ರೇಶ್ ಅವರಿಗೆ ಧನ್ಯವಾದ ತಿಳಿಸಿದರು.
ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಐಸಿಯು ವಾರ್ಡ್‍ಗೆ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದು, ಶೀಘ್ರ ಅದು ಕೂಡ ಆರಂಭಗೊಳ್ಳಲಿದೆ ಎಂದರು.
ಬಾಪೂಜಿ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಆಗೀ ಪರಿವರ್ತನೆ : ಶಿವಮೊಗ್ಗದಲ್ಲಿರುವ ನಮ್ಮ ಒಡೆತನದ ಬಾಪೂಜಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಆಸ್ಪತ್ರೆಯನ್ನು ಬಿಟ್ಟುಕೊಟ್ಟಿದ್ದು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಕರೋನಾ ಸೋಂಕಿತರಿಗೆ ಮೊದಲ ಆಧ್ಯತೆ ನೀಡಬೇಕು ಎಂದು ಹೇಳಿದ್ದೇನೆ ಎಂದರು. ಆಸ್ಪತ್ರೆಯಲ್ಲಿ 120 ಬೆಡ್ ವ್ಯವಸ್ಥೆ ಮಾಡಲಾಗಿದ್ದು ಇನ್ನೊಂದು ವಾರದಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಬಾಪೂಜಿ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ ಎಂದರು.
ಅಂಬ್ಯುಲೆನ್ಸ್ ವ್ಯವಸ್ಥೆ : ಅವಳಿ ತಾಲೂಕಿನಲ್ಲಿ ಆ್ಯಂಬುಲೆನ್ಸ್ ಕೊರತೆ ಇರುವುದರಿಂದ ಸ್ವಂತ ಆ್ಯಂಬುಲೆನ್ಸ್ ಒಂದನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ನೀಡಿದ್ದು ಇನ್ನೇರಡು ದಿನಗಳಲ್ಲಿ ಅಂಬ್ಯೂಲೆನ್ಸ್ ಸೇವೆ ರೋಗಿಗಳಿಗೆ ಸಿಗಲಿದೆ ಎಂದರು.
ಉಪಹಾರ ವ್ಯವಸ್ಥೆ ; ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರಿಗೆ ಹಾಗೂ ಲಸಿಕೆ ಹಾಕಿಸಿಕೊಳ್ಳಲ್ಲು ಬೆಳ್ಳಂ ಬೆಳಗ್ಗೆ ಬಂದಿದ್ದ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆಯನ್ನು ಶಾಸಕರು ಮಡಿದರು. ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯನ ಸೋಂಕಿತರಿಗೆ ಶಾಸಕರು ಉಪಹಾರದ ವ್ಯವಸ್ಥೆ ಮಾಡಿಸಿಕೊಂಡು ಬರುತ್ತಿದ್ದಾರೆ.
ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಪಿಎಸೈ ಬಸವನಗೌಡ ಬಿರಾದರ್,ಬಿಜೆಪಿ ಮುಖಂಡರಾದ ಮಹೇಂದ್ರಗೌಡ,ನೆಲಹೊನ್ನೆ ಮಂಜುನಾಥ್ ಸೇರಿದಂತರೆ ಮತ್ತೀತರರಿದ್ದರು.

ಚಿತ್ರಸುದ್ದಿ 01 ; ಹೊನ್ನಾಳಿ ನಗರದ ಅಂಬೇಡ್ಕರ್ ಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ದಾವಣಗೆರೆಯಿಂದ ಕೋವ್ಯಾಕ್ಸಿನ್ ಲಸಿಕೆ ತರಿಸಿ, ಎರಡನೇ ಹಂತದ ಲಸಿಕೆ ಹಾಕಿಸುವುದಕ್ಕೆ ಖುದ್ದು ವ್ಯವಸ್ಥೆ ಮಾಡಿದರು.

Leave a Reply

Your email address will not be published. Required fields are marked *