ದಾವಣಗೆರೆ : ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಕಫ್ರ್ಯೂ-
ಲಾಕ್‍ಡೌನ್ ಘೋಷಿಸಿರುವುದರಿಂದ ಬಡ ಕಾರ್ಮಿಕರಿಗೆ ದಿನದ ಎರಡು ಹೊತ್ತಿನ
ಊಟಕ್ಕೂ ಪರದಾಡುವಂತಾಗಿದೆ ಎಂದು ದಾವಣಗೆರೆ ಜಿಲ್ಲಾ ಕಾರ್ಮಿಕ ವಿಭಾಗದ
ಜಿಲ್ಲಾಧ್ಯಕ್ಷರಾದ ಹೆಚ್.ಸುಭಾನ್‍ಸಾಬ್ ಕಳವಳ ವ್ಯಕ್ತಪಡಿಸಿದ್ದಾರೆ.
ಗೊಂದಲಮಯವಾಗಿರುವ ಸರ್ಕಾರದ ಕೋವಿಡ್ ನಿಯಮಾವಳಿಗಳಿಂದ
ಬಡ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು, ಆಟೋ ಚಾಲಕರು,
ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ಸ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಡ ಮಹಿಳಾ
ಕಾರ್ಮಿಕರು, ಅಂದಿನ ದುಡಿಮೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದು
ಇವರುಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು
ಮುಖ್ಯಮಂತ್ರಿ ಯಡಿಯೂರಪ್ಪ ಪ್ಯಾಕೇಜ್‍ಘೋಷಣೆ ಮಾಡದೇ
ಕಾಲಹರಣ ಮಾಡುತ್ತಿರುವುದನ್ನು ಖಂಡಿಸಿದ ಅವರು ತಕ್ಷಣವೇ ಬಡ
ಕಾರ್ಮಿಕರ ಪರವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ಪರವಾಗಿ ಕಾಳಜಿ
ವಹಿಸಿ ಕಾರ್ಮಿಕ ಸಚಿವರಿಗೆ ಬುದ್ದಿಮಾತು ಹೇಳಬೇಕು ಇಲ್ಲದಿದ್ದರೆ
ಮುಂದಾಗುವ ಯಾವುದೇ ಪರಿಣಾಮಕ್ಕೂ
ಸರ್ಕಾರವೇಹೊಣೆಯಾಗಿರುತ್ತದೆ ಎಂದು ಎಚ್ಚರಿಸಿದರು.


ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಷರತ್ತುಬದ್ದ ಅನುಮತಿ ನೀಡಿ ಅವರು
ವಾಸಿಸುವ ವ್ಯಾಪ್ತಿಯಲ್ಲಿಯೇ ಕೆಲಸ ನಿರ್ವಹಿಸಲು ಆದೇಶ ಮಾಡಿರುವುದು
ಎಷ್ಟು ಸರಿ.? ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡ ಕೆಲಸ ಇಲ್ಲದಿದ್ದರೆ
ಕಾರ್ಮಿಕರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು ಇಂತಹ
ನಿಯಮಗಳಿಂದ ಬಡ ಕಾರ್ಮಿಕರಿಗೆ ತೊಂದರೆಯಾಗುತ್ತದೆಯೇ
ಹೊರತು ಅವರಿಗೆ ಕೂಲಿ ಕೆಲಸ ಸಿಗುವುದು ದುಸ್ತರವಾಗಿದೆ. ಅದ್ದರಿಂದ
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಲಿಯಲ್ಲಿರುವ ರೂ.9000 ಕೋಟಿ
ಹಣವನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರಿಗೆ ತಲಾ 10.000
ರೂಗಳನ್ನು ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಲಾಕ್‍ಡೌನ್ ಘೋಷಣೆಯಾದ ನಂತರ ಕಾರ್ಮಿಕ ಸಚಿವರಾದ ಶಿವರಾಮ್
ಹೆಬ್ಬಾರ್ ಅವರು ಕಾರ್ಮಿಕರ ಪರವಾಗಿ ಯಾವುದೇ ಪ್ಯಾಕೇಜ್‍ಗಳನ್ನು
ಘೋಷಣೆ ಮಾಡದೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಕಾರ್ಮಿಕ
ಕುಟುಂಬಗಳಿಗೆ ಸಾಂತ್ವನ ಸಹ ಹೇಳದೇ ಮೌನವಾಗಿರುವುದು ಎಷ್ಟು
ಸರಿ.? ಎಂದ ಅವರು ಕಾರ್ಮಿಕ ಸಚಿವರೋ ಅಥವಾ ಆಯೋಗ್ಯ ಸಚಿವರೋ
ಎಂದರು.
ಬಡ ಕಾರ್ಮಿಕರಿಗೆ ತಕ್ಷಣ ಪ್ಯಾಕೇಜ್ ಘೋಷಣೆ ಮಾಡದೇ ಇದ್ದಲ್ಲಿ
ಮುಂದಿನ ದಿನಗಳಲ್ಲಿ ಬೀದಿಗಿಳಿದು ಎಲ್ಲಾ ಕಾರ್ಮಿಕ ಇಲಾಖೆಗಳ ಮುಂದೆ
ಪ್ರತಿಭಟನೆ ನಡೆಸಿ, ಘೇರಾವ್ ಹಾಕಲಾಗುವುದು ಎಂದು ಹೆಚ್. ಸುಭಾನ ಸಾಬ್
ಎಚ್ಚರಿಸಿದರು.

Leave a Reply

Your email address will not be published. Required fields are marked *