ಹೊನ್ನಾಳಿ : ಆಕ್ಸಿಜನ್ ಎಲ್ಲಿ ಖಾಲಿಯಾಗುತ್ತದೋ ಎಂದು ಪ್ರತಿನಿತ್ಯ ಕೊರೊನಾ ಸೋಂಕಿತರು ಆತಂಕ ಪಡುತ್ತಿದ್ದು, ಇದೀಗ ಆಸ್ಪತ್ರೆಯ ಆವರಣದಲ್ಲೇ ಆಕ್ಸಿಜನ್ ಉತ್ಪಾದನಾ ಘಟಕ ಆರಂಭವಾಗುತ್ತಿದ್ದು ಕೊರೊನಾ ಸೋಂಕಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕು ಆಸ್ಪತ್ರೆಯ ಆವರಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದ್ದು ಇಂದು ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಕೆಲದಿನಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿನಿತ್ಯ ಆಕ್ಸಿಜನ್ ಸಿಲಿಂಡರ್ ಸಮಸ್ಯೆಯಾಗುತ್ತಿದ್ದು ಕೊರೋನಾ ಸೋಂಕಿತರು ಸಾಕಷ್ಟು ತೊಂದರೆ ಅನುಭವಿಸ ಬೇಕಾಗಿತ್ತಲ್ಲದೇ, ಪ್ರತಿನಿತ್ಯ ತಾವೇ ಖುದ್ದು ಹರಿಹರ, ಭದ್ರಾವತಿಗೆ ತೆರಳಿ ಆಕ್ಸಿಜನ್ ಸಿಲಿಂಡರ್ ತಂದು ಕೊರೊನಾ ಸೋಂಕಿತರ ಆತಂಕ ದೂರ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.
ಆದರೇ ಇದೀಗ ಆಸ್ಪತ್ರೆಯ ಆವರಣದಲ್ಲೇ ಆಕ್ಸಿಜನ್ ಉತ್ಪಾದನಾ ಘಟಕ ತಲೆ ಎತ್ತಲಿದ್ದು ಘಟಕ ಮಂಜೂರು ಮಾಡಿಸಿಕೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್ ಅವರಿಗೆ ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದರು.
ಆರಂಭದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕೇವಲ 17 ಸಿಲಿಂಡರ್ ಮಾತ್ರ ಇದ್ದು, ಇದೀಗ ಅವುಗಳನ್ನು 70ಕ್ಕೆ ಏರಿಕೆ ಮಾಡಿದ್ದು ಸದ್ಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿ ಕೊಳ್ಳಲು ಅನುಕೂಲವಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್, ಹೊನ್ನಾಳಿಯಲ್ಲಿ ಕೆಆರ್‍ಐಡಿಎಲ್ ನಿಂದ ಸಿಎಸ್‍ಆರ್ ಫಂಡ್ ಬಳಸಿಕೊಂಡು ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದ್ದು ಇನ್ನು 20 ದಿನಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದರು. ಹೊನ್ನಾಳಿ ಸೇರಿದಂತೆ 5 ಕಡೆ ಆಕ್ಸಿಜನ್ ಘಟಕ ನಿರ್ಮಾಣವಾಗುತ್ತಿದ್ದು ಇದಕ್ಕೆ ಸಹಕಾರ ನೀಡಿದ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದರು.
ಇಲ್ಲಿ ಶಾಶ್ವತವಾಗಿ ನೂರು ಹಾಸಿಗೆಗಳಿಗೆ ಆಕ್ಸಿಜನ್ ನೀಡ ಬಹುದಾಗಿದ್ದು, ಅಷ್ಟೇ ಅಲ್ಲದೇ ಇಲ್ಲಿಂದ ಬೇರೆ ಕಡೆಗೂ ಆಕ್ಸಿಜನ್ ತೆಗೆದುಕೊಂಡು ಹೋಗ ಬಹುದು ಎಂದ ಅವರು, ರಾಜ್ಯದಲ್ಲಿ ಮೂರನೇ ಅಲೆ ಬೇರೆ ಇದ್ದು ಜನರನ್ನು ರಕ್ಷಣೆ ಮಾಡ ಬೇಕಾಗಿದ್ದು ನಮ್ಮ ಕರ್ತವ್ಯವಾಗಿದ್ದು ವೈರಸ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡ ಬೇಕಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡ ಬೇಕಾಗಿದೆ ಎಂದರು.
ಈ ಸಂದರ್ಭ ಕೆಆರ್‍ಐಡಿಎಲ್ ಎಂ.ಡಿ.ಗಂಗಾಧರ್ ಸ್ವಾಮೀ, ಟೈಯಿನ್ ಹೆಲ್ತ್ ಕೇರ್ ಲಿಮಿಟ್‍ಡ್ ಬೆಂಗಳೂರಿನ ಮುಖ್ಯಸ್ಥ ಡಾ.ಪ್ರಶಾಂತ್, ಅದೀಕ್ಷಕ ಅಭಿಯಂತರ ರಾಜಣ್ಣ, ಕಾರ್ಯಪಾಲಕ ವಿಶ್ವನಾಥ್, ಎಇಇ ಕೆಂಚಪ್ಪ, ಡಾ.ಸುದೀಪ್, ಡಾ.ಸಂತೋಷ್,ಡಾ.ಲೀಲಾವತಿ,ಎಸೈ ಬಸವನಗೌಡ ಬಿರಾದರ್, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್ ಸೇರಿದಂತೆ ಮತ್ತೀತತರಿದ್ದರು.