ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ನಮಗೆ ವ್ಯಕ್ತಿಗಿಂತ ಕರ್ನಾಟಕ ರಾಜ್ಯದ ಪೋಲೀಸ್ ಇಲಾಖೆ ಗೌರವ ಮುಖ್ಯ. ಪೊಲೀಸ್ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಐಪಿಸಿ ಸೆಕ್ಷನ್ 376 ಅಡಿಯ ಆರೋಪಿಯನ್ನು ಸ್ವತಂತ್ರವಾಗಿ ತಿರುಗಾಡಿಕೊಂಡಿರಲು ಬಿಟ್ಟಿದ್ದಾರೆ. ಆರೋಪಿಯನ್ನು ರಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಟ್ಟ ಸಂಪ್ರದಾಯಕ್ಕೆ ಬುನಾದಿ ಹಾಕಿಕೊಡುತ್ತಿದ್ದಾರೆ. ಕೆಟ್ಟ ಇತಿಹಾಸ ನಿಮ್ಮಿಂದ ನಿರ್ಮಾಣವಾಗುತ್ತದೆ.

ಭವಿಷ್ಯದಲ್ಲಿ ಇಂತಹ ಯಾವುದೇ ಪ್ರಕರಣ ವರದಿಯಾದರೂ ಈ ಪ್ರಕರಣವನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳುತ್ತಾರೆ. ನಾನು ಸೌಮೇಂದು ಮುಖರ್ಜಿ, ಸಂದೀಪ್ ಪಾಟೀಲ್, ಅನುಚೇತ್ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಒಂದು ವಿಚಾರ ಹೇಳಲು ಬಯಸುತ್ತೇನೆ. ನೀವು ಇನ್ನು ಹತ್ತಾರು ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕಿದೆ. ರಾಜಕಾರಣಿಗಳು ಇಂದು ಇರುತ್ತಾರೆ, ನಾಳೆ ಹೋಗುತ್ತಾರೆ. ಆದರೆ ಪೊಲೀಸರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬಾರದು. ನೀವು ಹಾಕಿಕೊಂಡಿರುವ ಸ್ಟಾರ್ ಗಳಿಗೆ ಧಕ್ಕೆ ತಂದುಕೊಳ್ಳಬಾರದು. ಕೆಟ್ಟ ಉದಾಹರಣೆಯಾಗಬಾರದು.

ಕಾನೂನು ಏನು ಹೇಳುತ್ತದೆ, ಪೊಲೀಸ್ ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂದು ನಮ್ಮ ಶಾಸಕಾಂಗ ಪಕ್ಷದ ನಾಯಕರು ಹೇಳಿದ್ದಾರೆ. ಗೃಹಸಚಿವ ಬೊಮ್ಮಾಯಿ ಅವರು ಏನು ಹೇಳಿದ್ದರು? ಆ ಸಂತ್ರಸ್ತ ಯುವತಿ ದೂರು ಕೊಟ್ಟರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಆಕೆ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದು, ಲಿಖಿತ ದೂರನ್ನೂ ನೀಡಿದ್ದಾಳೆ. ಕಣ್ಣೀರು ಹಾಕಿದ್ದಾಳೆ. ಈ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸುವುದು ಪೊಲೀಸರ ಮೊದಲ ಕರ್ತವ್ಯ. ಸಿಡಿ ಯಾರ ಬಳಿ ಇತ್ತು, ಯಾರು ಕರೆ ಮಾಡಿದ್ದರು, ಎಷ್ಟು ಹುಡುಗಿಯರಿಗೆ ಕರೆ ಮಾಡಿದ್ದರು ಎಂಬುದೆಲ್ಲವೂ ಬಹಿರಂಗವಾಗಬೇಕು. ಅದನ್ನು ಬಿಟ್ಟು ಪೊಲೀಸರು ಇನ್ಯಾರನ್ನೋ ಹುಡುಕಾಡುತ್ತಿದ್ದಾರೆ.

ಆ ಸಂತ್ರಸ್ತೆ ವಿರುದ್ಧ ಮಾಧ್ಯಮಗಳಲ್ಲಿ ವರದಿ ಬರುವ ಹಾಗೆ ಮಾಡುತ್ತಿದ್ದೀರಿ. ಆಕೆಯ ತಂದೆ-ತಾಯಿಗೆ ನೋಟೀಸ್ ಕೊಟ್ಟು ಕಿರುಕುಳ ಕೊಡುತ್ತಿದ್ದೀರಿ. ಅವರ ಮೇಲೆ ಒತ್ತಡ ಹಾಕಲು ಅವಕಾಶ ಮಾಡಿಕೊಡುತ್ತಿದ್ದೀರಿ. ಆ ಹೆಣ್ಣುಮಗಳ ತಂದೆ-ತಾಯಿ, ಸಹೋದರರು ಯಾರದೋ ಒತ್ತಡದಲ್ಲಿ ನನ್ನ ಬಗ್ಗೆ ಮಾತಾಡಿದರು. ನನಗೇನೂ ಬೇಜಾರಿಲ್ಲ. ಅವರೀಗ ಪೊಲೀಸರ ನೋಟೀಸ್ ನೋಡಿ ನೋವು ಪಡುತ್ತಿದ್ದಾರೆ. ಅವರಿಗೆ ಟಾರ್ಚರ್ ಕೊಡುತ್ತಿದ್ದೀರಿ. ನಿಮ್ಮದು ರಾಮ ರಾಜ್ಯವೋ, ರಾವಣನ ರಾಜ್ಯವೋ?

ಈ ನೆಲದ ಕಾನೂನು ಏನು ಹೇಳುತ್ತದೆ? ವಿಡಿಯೋ ಅಸಲಿಯಾದರೆ ರೇಪ್ ಕೇಸ್ ಹಾಕುವುದಾಗಿ ಗೃಹ ಸಚಿವರೇ ಹೇಳಿದ್ದರು. ಈಗ ಆರೋಪಿ ವಿರುದ್ಧ FIR ಆಗಿದೆ. ಆದರೂ ಅರೆಸ್ಟ್ ಇಲ್ಲ. ಈ ಮಧ್ಯೆ ಕೊರೋನಾ ಸೋಂಕು ಅಂತಾ ನೆಪ ಹೇಳಿದರು. ಎಲ್ಲರೂ ಸೋಂಕು ಬಂದರೆ ಬೆಂಗಳೂರಿನ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಅವರು ಗೋಕಾಕ್ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅಂತಹ ಸ್ಪೆಷಾಲಿಟಿ ಆಸ್ಪತ್ರೆ ಇದೆಯೇ? ಎಲ್ಲಿ ಅವರ ಕೊರೋನಾ ರಿಪೋರ್ಟ್‌? ಟ್ರಾಕಿಂಗ್ ರೆಕಾರ್ಡ್ ಎಲ್ಲಿ? ಯಾರಾದರೂ ಸೋಂಕಿತ ಪಿಪಿಇ ಕಿಟ್ ಹಾಕಿಕೊಂಡು ಚಿಕಿತ್ಸೆ ಪಡೆಯುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ನಾನು ಕೇವಲ ನರ್ಸ್, ಡಾಕ್ಟರ್, ಶವ ಸಾಗಿಸುವರು ಮಾತ್ರ ಪಿಪಿಇ ಕಿಟ್ ಹಾಕಿಕೊಳ್ಳೋದು ನೋಡಿದ್ದೆ. ಆರೋಪಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ? ನೀವೆಲ್ಲ ಹೇಗೆ ಸಹಾಯ ಮಾಡುತ್ತಿದ್ದೀರಿ? ಹೇಗೆ ಅವರ ರಕ್ಷಣೆಗೆ ನಿಂತಿದ್ದೀರಿ ನೋಡಿ.

ಸಂತ್ರಸ್ತೆ ರಕ್ಷಣೆ ಕೋರಿ ಕಾಂಗ್ರೆಸ್ ಪಕ್ಷ, ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ, ರಮೇಶ್ ಕುಮಾರ್ ಮತ್ತು ಶಿವಕುಮಾರ್ ರಕ್ಷಣೆಗೆ ಬರಬೇಕೆಂದು ಕೇಳಿದ್ದಾರೆ. ನಮ್ಮ ಪಕ್ಷದಲ್ಲಿರುವ ಕೆಲವು ವಕೀಲರು ಆಕೆಯ ರಕ್ಷಣೆಗೆ ನಿಂತಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅವರ ಮೇಲೂ ಒತ್ತಡ ಹಾಕುತ್ತಿದ್ದಾರೆ. ಮಾಜಿ ಮಂತ್ರಿಗಳು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಸಂತ್ರಸ್ಥೆಯ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ.

ಈ ಪ್ರಕರಣ ಸಮ್ಮತಿಯಿಂದ ನಡೆದಿದೆಯೋ, ಬಲವಂತದಿಂದ ನಡೆದಿದಿಯೋ ಎಂದು ತೀರ್ಮಾನ ಮಾಡುವುದು ಪೊಲೀಸ್ ಅಧಿಕಾರಿಗಳಲ್ಲ. ಇದನ್ನು ಮಾಡಲು ಸಾಧ್ಯವಿಲ್ಲ ಮುಖರ್ಜಿ ಅವರೇ. ನಿಮ್ಮ ಸ್ಥಾನದ ಗೌರವಕ್ಕೆ ನೀವು ಮಸಿ ಬಳಿದುಕೊಳ್ಳಬೇಡಿ. ವಿಚಾರಣೆ ನಡೆದ ನಂತರ ಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ನೀವು ಬೇರೆಯವರಿಗೆ ಮಾದರಿ ಆಗಬೇಕು.

ಮಾಜಿ ಸಚಿವರ ಮೇಲೆ ರೇಪ್ ಆರೋಪ ಕೇಳಿ ಬಂದ ನಂತರ ಗೃಹ ಸಚಿವರನ್ನು ಅವರು ಭೇಟಿ ಮಾಡುತ್ತಾರೆ. ಇದನ್ನು ಮಾಧ್ಯಮಗಳು ವರದಿ ಮಾಡಿವೆ. ಸಂಬಂಧಪಟ್ಟವರು ಇದನ್ನು ನಿರಾಕರಿಸಿಲ್ಲ. ರೇಪ್ ಆರೋಪಿಯ ಫೋನ್ ಕರೆಗಳ ದಾಖಲೆ ತೆಗೆಯಿರಿ. ಈ ರೀತಿ ಇನ್ನು ಎಷ್ಟು ಹೆಣ್ಣುಮಕ್ಕಳು ಇಂತಹ ಪರಿಸ್ಥಿತಿ ಎದುರಿಸಿದ್ದಾರೋ? ಈ ಪ್ರಕರಣ ಹೈಕೋರ್ಟ್ ನಿರ್ದೇಶನದಲ್ಲಿ ತನಿಖೆ ಆಗಬೇಕು.

ಗೃಹ ಸಚಿವರೇ ನಿಮ್ಮ ಹೆಸರು ಪ್ರಮುಖ ಹುದ್ದೆಯ ಚರ್ಚೆಯಲ್ಲಿದೆ. ನಿಮಗೆ ಒಳ್ಳೆಯದಾಗಲಿ. ಆದರೆ ಈ ಪ್ರಕರಣದಲ್ಲಿ ನಿಮ್ಮ ತಪ್ಪುಗಳು ನಿಮಗೇ ಕಪ್ಪುಚುಕ್ಕೆ ಆಗಬಾರದು. ನೀವು ಕೇವಲ ಗೃಹ ಸಚಿವರಲ್ಲ, ಕಾನೂನು ಸಚಿವರೂ ಹೌದು. ನಿಮ್ಮ ತಂದೆ ಅವರು ಎಂತಹ ಹೆಸರು ಮಾಡಿದ್ದರು? ನೀವ್ಯಾಕೆ ಈ ರೀತಿ ಮಾಡಿ ಹೆಸರು ಹಾಳು ಮಾಡಿಕೊಳ್ಳುತ್ತೀರಿ. ನೀವು ಕೂಡಲೇ ರೇಪ್ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ನೀವು ಕ್ರಮ ಕೈಗೊಳ್ಳುತ್ತಿರುವ ರೀತಿ ನೋಡಿದರೆ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಗೆ ಸಿಗುವುದಿಲ್ಲ ಎಂಬ ಸಂದೇಶ ರವಾನೆ ಆಗುತ್ತಿದೆ.

ಹೀಗಾಗಿ ಕೂಡಲೇ ರೇಪಿಸ್ಟ್ ರಮೇಶನನ್ನು ಬಂಧಿಸಿ, ಆತನ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಆಗ ಈತ ಕೊಟ್ಟಹೇಳಿಕೆಗಳು, ಹೊಡೆದ ಡೈಲಾಗ್ ಗಳು ಈಗ ಯಾಕೆ ಆಚೆ ಬರುತ್ತಿಲ್ಲ? ಈಗ ಪತ್ರಿಕಾಗೋಷ್ಠಿ ನಡೆಸಿ ಯಾರು ನಿಮಗೆ ಬೆದರಿಸಿ ಹಣ ಕೇಳಿದರು, ಯಾರು ಒತ್ತಡ ಹಾಕಿದರು ಎಂದು ಹೇಳಿ. ನೀವು ಇಂತಹ ದುಷ್ಟ ನಡವಳಿಕೆ ಇಟ್ಟುಕೊಂಡು, ಆ ಹೆಣ್ಣಿನ ನಡವಳಿಕೆ ಬಗ್ಗೆ ಮಾತನಾಡುತ್ತೀರಾ? ಆಕೆ ವಿರುದ್ಧ ಎಂತಹ ಶಬ್ಧ ಬಳಸಿದ್ದೀರಿ? ಕರ್ನಾಟಕ ಭವನಕ್ಕೆ ಹೋಗಿ ಅಲ್ಲಿಯೂ ತನಿಖೆ ಮಾಡಬೇಕು. ಆಡಿಯೋ, ವಿಡಿಯೋದಲ್ಲಿ ಯಾರ ಹೆಸರೆಲ್ಲಾ ಬಂದಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ, ರಾಜ್ಯದ ಘನತೆ, ರಾಜ್ಯದ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸುತ್ತದೆ. ಗೃಹ ಸಚಿವರೇ ನೀವು ನ್ಯಾಯ ನೀಡುವ ಸ್ಥಾನದಲ್ಲಿ ಕೂತು ಅನ್ಯಾಯಕ್ಕೆ ಅವಕಾಶ ಕೊಡಬಾರದು. Injustice should not flow from the seat of justice.

ನಮ್ಮನ್ನು ಮುಟ್ಟಿದರೆ ಅವರ ಕಥೆ ಬಿಚ್ಚಿಡುತ್ತೇವೆ ಎಂದಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ನಾವ್ಯಾಕೆ ಹೆದರಬೇಕು? ಯಡಿಯೂರಪ್ಪನವರೂ ಇದಕ್ಕೆಲ್ಲ ಹೆದರುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಇಚ್ಚಿಸುವುದಿಲ್ಲ. ಹೀಗಾಗಿ ಉಪ ಚುನಾವಣೆಯನ್ನು ನಾವು ಸಿದ್ಧಾಂತದ ಮೇಲೆ ಹೋರಾಟ ಮಾಡಿದೆವು.’

Leave a Reply

Your email address will not be published. Required fields are marked *