ಶಿವಮೊಗ್ಗ: ಆತ ಒಬ್ಬ (ಸಿ.ಪಿ.ಯೋಗೇಶ್ವರ್) ಒಬ್ಬ ಫೋರ್ ಟ್ವೆಂಟಿ, ಮಹಾನ್ ಕಳ್ಳ, ಮೆಗಾಸಿಟಿ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರವೆಸಗಿ ಮೋಸ ಮಾಡಿದ್ದಾನೆ. ಈತ ಏನೇನು ಹಗರಣ ಮಾಡಿದ್ದಾನೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು ಹಾಗೂ ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಹೊನ್ನಾಳಿ ತಾಲೂಕಿನ ಸಂಯೋಜಕ ಆರ್.ಮೋಹನ್ ಒತ್ತಾಯಿಸಿದ್ದಾರೆ.
ಸಚಿವ ಯೋಗೇಶ್ವರ್ ಅವರ ಕಳ್ಳತನ, ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆಂದು ರೇಣುಕಾಚಾರ್ಯ ಬಹಿರಂಗವಾಗಿ ಹೇಳಿದ್ದು, ಮೆಗಾಸಿಟಿ ಹಗರಣದಲ್ಲಿ ಯೋಗೇಶ್ವರ್‌ರನ್ನು ಬಂಧಿಸಬೇಕೆಂದು ಗೃಹ ಸಚಿವರನ್ನು ಒತ್ತಾಯಿಸಿರುವುದು ಸಮಂಜಸವಾಗಿದೆ. ಆದರೆ ಯೋಗೇಶ್ವರ್ ಮೆಗಾಸಿಟಿ ಯೋಜನೆಯಲ್ಲಿ ತಪ್ಪೆಸಗಿರುವ ಮಾಹಿತಿ ರೇಣುಕಾಚಾರ್ಯರಿಗೆ ಇದ್ದಲ್ಲಿ ಅವರು ಇಷ್ಟು ದಿನ ಮೌನವಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆಯಲ್ಲದೆ ಅವರ ಈ ನಡವಳಿಕೆ ಅನುಮಾನಾಸ್ಪದವಾಗಿದೆ.
ಅಪರಾಧ ಎಸಗುವುದು ಹೇಗೆ ಕಾನೂನು ಬಾಹಿರವೋ ಅಂತೆಯೇ ಅವ್ಯವಹಾರ, ಹಗರಣದ ಬಗ್ಗೆ ಮಾಹಿತಿ ಗೊತ್ತಿದ್ದು ಕೂಡ ಸುಮ್ಮನಿರುವುದು ಸರಿಯಲ್ಲ. ಯೋಗೇಶ್ವರ್ ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದ್ದಾರೆಂಬ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಮುಖ್ಯಮಂತ್ರಿಯವರ ಓಲೈಕೆಗಾಗಿ ಇಂತಹ ಹೇಳಿಕೆ ನೀಡಿದ್ದರೆ ಇದು ಗೋಸುಂಬೆ ರಾಜಕಾರಣವಾಗುತ್ತದೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಬಂಡಾಯದ ನಾಯಕತ್ವ ವಹಿಸಿ ರೆಸಾರ್ಟ್‌ವೊಂದರಲ್ಲಿ ಬೀಡುಬಿಟ್ಟಿದ್ದ ಹಾಗೂ ಬಂಡಾಯ ಶಮನಗೊಂಡ ನಂತರ ಕೃಷಿ ಬಗ್ಗೆ ಅಧ್ಯಯನ ನಡೆಸಲು ರೆಸಾರ್ಟ್‌ನಲ್ಲಿ ತಂಗಿದ್ದೆ ಎಂದು ಹೇಳಿಕೆ ನೀಡಿದ್ದ ಮಹಾನುಭಾವ ರಾಜಕಾರಣಿ ಯಾರೆಂಬುವುದು ರಾಜ್ಯದ ಜನತೆಗೆ ಗೊತ್ತಿದೆ.
: ಎಂದು ಎ ಬಿ ಸಿ ನ್ಯೂಸ್ ಆನ್ ಲೈನ್ ರವರಿಗೆ ಕೆ ಪಿ ಸಿ ಸಿ ಸದಸ್ಯರಾದ ಆರ್ ಮೊಹನ್ ರವರು ತಿಳಿಸಿದರು.