ದಾವಣಗೆರೆ: ಕೋವಿಡ್ 19ರ ಸೋಂಕಿನ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರದ ಧನವಾಗಿ 3ಸಾವಿರ ರೂ.ಗಳನ್ನು ನೀಡಲು ಮುಂದಾಗಿದ್ದು, ನಕಲಿ ಕಟ್ಟಡ ಕಾರ್ಮಿಕರಿಗೆ ನೀಡದೇ ಅರ್ಹ ಕಟ್ಟಡ ಕಾರ್ಮಿಕರಿಗೆ ನೀಡುವಂತೆ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಸರ್ಕಾರ, ಕಾರ್ಮಿಕ ಇಲಾಖೆಯನ್ನು ಒತ್ತಾಯಿಸಿದೆ.

ರಾಜ್ಯದಲ್ಲಿ 24.98ಲಕ್ಷ ಕಟ್ಟಡ ಕಾರ್ಮಿಕರಿದ್ದು, ಅದರಲ್ಲಿ 16ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಗುರುತಿನಿ ಚೀಟಿಗಳನ್ನು ನೀಡಲಾಗಿದೆ. ಇನ್ನುಳಿದ 8ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಐಡಿ ಕಾರ್ಡು ನೀಡಬೇಕಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 16ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದಾರೆ. ಸರ್ಕಾರ 2ನೇ ಅಲೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ಯಾಕೇಜ್ ಹಣ ಬಂದಿಲ್ಲ. ಇದಲ್ಲದೇ ಮೊದಲನೇ ಅಲೆಯಲ್ಲೇ ರಾಜ್ಯದಲ್ಲಿ ಅರ್ಜಿ ಹಾಕಿದ್ದ 10ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಸರ್ಕಾರದ ಸಹಾಯಧನ 5ಸಾವಿರ ರೂ. ಸಿಕ್ಕಿಲ್ಲ. ಈಗ ಮತ್ತೆ ಸರ್ಕಾರ ಕಾರ್ಮಿಕರಿಗೆ 3ಸಾವಿರ ರೂ,ಗಳನ್ನು ಘೋಷಣೆ ಮಾಡಿದೆ. ಅದರೆ ಈ ಹಣ ಅನ್ಯರ ಪಾಲಾಗುವ ಸಾಧ್ಯತೆಗಳಿವೆ.

ಸರ್ಕಾರದಿಂದ ಮಾನ್ಯತೆ ಪಡೆಯದೇ ಇರುವ ಎನ್‍ಜಿಓಗಳು ಸರ್ಕಾರದಿಂದ ಹಣ ಕೊಡಿಸುವುದಾಗಿ ಹೇಳಿ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿವೆ. ಇದಲ್ಲದೇ ಯಾವುದೇ ಕಟ್ಟಡ ಕೆಲಸ ಮಾಡದೇ ಇರುವ ವ್ಯಕ್ತಿಗಳಿಗೆ ಎನ್‍ಜಿಓಗಳು ಕಾರ್ಡು ಮಾಡಿಕೊಡುತ್ತಿವೆ. ಸರ್ಕಾರ, ಇಲಾಖೆ ಕೂಡ ಯಾವುದೇ ಪರಿಶೀಲನೆ ನಡೆಸದೇ ಅಂತಹವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇದರಿಂದಾಗಿ ಬಿಸಿಲು, ಮಳೆ, ಗಾಳಿ ಎನ್ನದೇ ಬೆವರು ಸುರಿಸಿ ದುಡಿಯುವ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಕಾರ್ಮಿಕ ಇಲಾಖೆಗೆ ಲಿಖಿತ ಮೂಲಕ, ಮೌಖಿಕವಾಗಿಯೂ ತಿಳಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದಿದೆ.

2006ರಿಂದ ಈಚೆಗೆ ನೊಂದಣಿ ಮಾಡಿದ ಕಟ್ಟಡ ಕಾರ್ಮಿಕರಿಗೆ ವರ್ಷವಾರು ಆಧಾರದ ಮೇಲೆ ಹಣ ಅವರ ಖಾತೆಗೆ ನೇರವಾಗಿ ಹಾಕಿದರೆ ಎಲ್ಲಾ ಕಾರ್ಮಿಕರಿಗೆ ಹಣ ತಲುಪಲಿದೆ. ಇದಲ್ಲದೇ ಬ್ಯಾಂಕುಗಳು ವಿಲೀನಗೊಂಡಿದ್ದು, ಅಲ್ಲಿನ ಖಾತೆಯ ಸಂಖ್ಯೆ, ಐಎಫ್‍ಎಸ್‍ಸಿ ಕೋಡ್ ಕೂಡ ಬದಲಾಗಿದೆ. ಇದರಿಂದಾಗಿ ಅಂತಹ ಖಾತೆದಾರರಿಗೆ ಹಣ ತಲುಪುತ್ತಿಲ್ಲ. ಇಂತಹ ಖಾತೆದಾರರಿಗೆ ನೇರವಾಗಿ ನಗದು ನೀಡುವ ವ್ಯವಸ್ಥೆ ಆಗಬೇಕು. ಇದಕ್ಕೆ ಅವರ ದಾಖಲಾತಿಯನ್ನೇ ಆಧಾರ ಮಾಡಿಕೊಳ್ಳಬೇಕು. ಈ ಬಗ್ಗೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೇ ಪರಿಶೀಲನೆ ನಡೆಸುವಂತೆ ಆಗಬೇಕು ಎಂದು ಒತ್ತಾಯಿಸಿದೆ.

ಇಂತಹ ಸಂದರ್ಭವನ್ನು ಕೆಲವು ಅನಧಿಕೃತ ಎನ್‍ಜಿಓಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇಲಾಖೆಯಿಂದ ಹಣ, ಆಹಾರದ ಕಿಟ್ ಕೊಡಿಸುವುದಾಗಿ ಕಾರ್ಮಿಕರನ್ನು ದಾರಿತಪ್ಪಿಸುತ್ತಿವೆ. ಮಾತ್ರವಲ್ಲ ಅವರಿಂದ 300 ರಿಂದ 400 ರೂ.ಗಳನ್ನು ವಸೂಲಿ ಮಾಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ, ಹಳೇ ದಾವಣಗೆರೆ, ವಿನೋಬಾ ನಗರ, ನಿಟುವಳ್ಳೀ ಸೇರಿದಂತೆ ಕಾರ್ಮಿಕರೇ ಹೆಚ್ಚು ವಾಸ ಆಗಿರುವ ಪ್ರದೇಶಗಳಲ್ಲಿ ಎನ್‍ಜಿಓಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಾರಣ ಯಾವುದೇ ಕಾರಣಕ್ಕೂ ಹಣ ನೀಡದೇ ಮೂಲ ಸಂಘಟನೆ ಗಮನಕ್ಕೆ ತರಬೇಕಿದೆ ಎಂದು ಮನವಿ ಮಾಡಿದ್ದಾರೆ.

ಇದಲ್ಲದೇ ಕಾರ್ಮಿಕರಿಗೆ 3ಸಾವಿರ ಅವರ ಜೀವನಕ್ಕೆ ಸಾಲದು, 10ಸಾವಿರ ರೂ.ಗಳ ಪರಿಹಾರ ಧನ ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಯಾವುದೇ ಪೊಳ್ಳು ಜನರ ಮಾತಿಗೆ, ಸುಳ್ಳು ಸುದ್ದಿಗೆ ಕಿವಿಗೊಡದೆ ದಾಖಲಾತಿ, ಹಣ ನೀಡಿ ವಂಚನೆಗೆ ಒಳಗಾಗದೇ ಸಂಘಟನೆ ಗಮನಕ್ಕೆ ತರಬೇಕಿದೆ ಎಂದು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್.ಜಿ.ಉಮೇಶ್, ಕಾರ್ಯಾಧ್ಯಕ್ಷ ಪಿ.ಕೆ.ಲಿಂಗರಾಜು, ಪದಾಧಿಕಾರಿಗಳಾದ ನೇತ್ರಾವತಿ, ಭೀಮಾರೆಡ್ಡಿ, ಶಿವಕುಮಾರ್ ಶೆಟ್ಟರ್, ಡಿ.ಷಣ್ಮುಗಂ ಇತರರು ಕಾರ್ಮಿಕರಿಗೆ ಕಿವಿಮಾತು ಹೇಳಿದ್ದಾರೆ.

Leave a Reply

Your email address will not be published. Required fields are marked *