ಹುಬ್ಬಳ್ಳಿ:

‘ಲಾಕ್ ಡೌನ್, ಮಾರುಕಟ್ಟೆ ಸಮಸ್ಯೆ, ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿರುವ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅವರ ಧ್ವನಿಯಾಗಿ ಅವರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ’ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಳೀಯ ರೈತರ ಜಮೀನಿಗೆ ಸೋಮವಾರ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿದ ಶಿವಕುಮಾರ್ ಅವರು, ರೈತರ ಬೆನ್ನಿಗೆ ನಿಲ್ಲುವ ಭರವಸೆ ಕೊಟ್ಟರು.

ರೈತರು ಹಾಗೂ ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು:

‘ಕೋವಿಡ್ ಪಿಡುಗಿನ ಸಮಯದಲ್ಲಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. 6 ರಿಂದ 8 ಗಂಟೆ ನಡುವೆ ಅಂದರೆ ಎರಡೇ ತಾಸಿನ‌ ಅವಧಿಯಲ್ಲಿ ಅವರು ತರಕಾರಿ, ಹಣ್ಣು-ಹಂಪಲು ಮತ್ತು ಇತರ ಬೆಳೆಗಳನ್ನು ಮಾರಬೇಕೆಂಬ ಆದೇಶದಿಂದ ಎಲ್ಲ ಬೆಳೆಗಳು ಬಿಕರಿಯಾಗದೆ ಹಾಳಾಗುತ್ತಿವೆ.

ಬಿತ್ತನೆಯ ಸಮಯ ಪ್ರಾರಂಭವಾಗಿದ್ದರೂ ರೈತರಿಗೆ ಗೊಬ್ಬರ, ಬೀಜ ಹಾಗೂ ಡಿಎಪಿ ದೊರೆಯುತ್ತಿಲ್ಲ. ಬೆಂಬಲ ಬೆಲೆಯನ್ನೂ ನಿಗದಿಪಡಿಸಿಲ್ಲ. ದೇಶದಲ್ಲೇ ಅತ್ಯುತ್ತಮವಾದ ಕರ್ನಾಟಕದ ಮೆಣಸಿನಕಾಯಿಯನ್ನು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷ ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಅವರ ರಕ್ಷಣೆಗೆ ಮುಂದಾಗಿದ್ದೆವು. ಇಡೀ ದೇಶಕ್ಕೆ ಇಲ್ಲಿನ ಮೆಣಸಿನಕಾಯಿ ಮಾದರಿ. ಸೋಮವಾರದ ಹಿನ್ನೆಲೆಯಲ್ಲಿ ಎಪಿಎಂಸಿ ಬಂದ್ ಆಗಿದ್ದು, ಹೀಗಾಗಿ ರೈತರೊಂದೆಗೆ ಚರ್ಚೆ ಮಾಡಲು ನೇರವಾಗಿ ಇಲ್ಲಿಗೆ ಬಂದಿದ್ದೇನೆ.

ಕಳೆದ ವರ್ಷದ ಪರಿಹಾರವನ್ನೂ ಕೊಟ್ಟಿಲ್ಲ. ಸರ್ಕಾರ ತರಕಾರಿ, ಹೂ, ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ ₹10 ಸಾವಿರ ಪರಿಹಾರ ಘೋಷಿಸಿದೆ. ಸಣ್ಣ ರೈತರು ಅರ್ಧ ಎಕರೆಯಲ್ಲಿ ಬೆಳೆ ಬೆಳೆಯುತ್ತಾರೆ. ಆತ ತನಗೆ ಬರುವ ಬಿಡಿಗಾಸಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಾ? ಯಾವ ಅಧಿಕಾರಿಯೂ ಈ ರೈತರನ್ನು ಭೇಟಿ ಮಾಡಿಲ್ಲ.

ಸರ್ಕಾರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ್ದು, ರೈತರ ಬೆಳೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಯಾರ ಪರವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಮುಖ್ಯಮಂತ್ರಿಗಳು,ಮುಖ್ಯ ಕಾರ್ಯದರ್ಶಿಗಳು ಮತ್ತು ಕೃಷಿ ಇಲಾಖೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು‌. ಸರ್ಕಾರ ರೈತರ ಬಳಿ ಹೋಗಿ ಅವರ ಸಮಸ್ಯೆ ಆಲಿಸಬೇಕು.

ಕೃಷಿ ಕ್ಷೇತ್ರವು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ಸಹಾಯಹಸ್ತ ಚಾಚುವ ಅವಶ್ಯಕತೆಯಿದೆ. ತರಕಾರಿ ಹಾಗೂ ಹೂವು ಬೆಳೆಗಾರರ ಕೊರೋನಾ ಪರಿಹಾರ ಪ್ಯಾಕೇಜ್ ಅನ್ನು ಪ್ರತಿ ಎಕರೆಗೆ ನಾಲ್ಕು ಸಾವಿರ ರೂ.ನಿಂದ ಹತ್ತು ಸಾವಿರಕ್ಕೆ ಏರಿಸಬೇಕು.

ಲಾಕ್ ಡೌನ್ ವಿಚಾರವಾಗಿ ಸರ್ಕಾರ ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಲಿ. ಆದರೆ ನಷ್ಟ ಅನುಭವಿಸುವ ಜನರಿಗೆ ಪರಿಹಾರ ನೀಡಲಿ.

ಹಳ್ಳಿ ಹಳ್ಳಿಗೆ ಹೋಗಿ ಚಾಲಕರಿಗೆ ಪರಿಹಾರ ಕೊಡಿ:

ಚಾಲಕ ವೃತ್ತಿ 25 ಲಕ್ಷ ಜನರ ನಿರುದ್ಯೋಗವನ್ನು ದೂರ ಮಾಡಿದೆ. ನಾನು ನನ್ನ ಚಾಲಕ ಇಲ್ಲದೆ ಈಚೆ ಬರಲು ಸಾಧ್ಯವಿಲ್ಲ. ಚಾಲಕರ ಮೇಲೆ ನಾವು ಮಾನಸಿಕ ಒತ್ತಡ ಹಾಕಬಾರದು. ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಈ ಚಾಲಕರನ್ನು ಸರ್ಕಾರ ನಿರ್ಲಕ್ಷಿಸಬಾರದು.

ನೀವು ಎಷ್ಟಾದರೂ ಪರಿಹಾರ ಕೊಡಿ. ನಿಮ್ಮ ಪಾಲಿಕೆ ಸದಸ್ಯರು, ರೆವೆನ್ಯೂ ಇನ್ಸ್ಪೆಕ್ಟರ್ ಇಟ್ಟುಕೊಂಡು ಎಲ್ಲ ಊರಿನಲ್ಲಿರುವ ಚಾಲಕರಿಗೆ ಪರಿಹಾರ ಕೊಟ್ಟು ಬನ್ನಿ. ಅವನಿಗೆ ಆನ್ಲೈನ್ ಅರ್ಜಿ ಹಾಕುವ ಶಕ್ತಿ ಇದ್ದಿದ್ದರೆ ಅವನೇಕೆ ಚಾಲಕನಾಗುತ್ತಿದ್ದ? ನಾನು ಅವರ ಧ್ವನಿಯಾಗಿ ಇರುತ್ತೇನೆ.

ಅಧಿಕಾರಿ- ಜನಪ್ರತಿನಿಧಿಗಳ ತಿಕ್ಕಾಟ ನಿಲ್ಲಲಿ:

ಅಧಿಕಾರಿ ಜನಪ್ರತಿನಿಧಿಗಳು ಜಗಳ ನಿಲ್ಲಿಸಿ ಜನರ ಬಗ್ಗೆ ಗಮನಹರಿಸಿ. ಅವರಿಗೆ ಸಮಸ್ಯೆ ಇದ್ದರೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ಪರಿಹಾರ ಕಂಡುಕೊಳ್ಳಲಿ. ನಿಮಗೆ ಬೇಕಾದಂತೆ ಐದು ನಿಮಿಷದಲ್ಲಿ ಅಧಿಕಾರಿ, ಮಂತ್ರಿಗಳನ್ನು ಬದಲಾವಣೆ ಮಾಡುತ್ತೀರಿ. ಅದೇ ರೀತಿ ನಿಮಗೆ ಬೇಕಾದವರನ್ನು ಕರೆತಂದು ಕೆಲಸ ಮಾಡಿ. ಜಿಲ್ಲಾಧಿಕಾರಿ ಮಾಡುವ ಕೆಲಸ ಪ್ರತಾಪ್ ಸಿಂಹ ಮಾಡಲು ಸಾಧ್ಯವಿಲ್ಲ, ಪ್ರತಾಪ್ ಸಿಂಹ ಮಾಡುವ ಕೆಲಸ ಜಿಲ್ಲಾಧಿಕಾರಿಗೆ ಮಾಡಲು ಸಾಧ್ಯವಿಲ್ಲ. ಈ ಜಗಳ ನೋಡಿ ಜನ ಉಗಿಯುತ್ತಿದ್ದಾರೆ. ಏನೇ ಸಮಸ್ಯೆ ಇದ್ದರೂ, ಸರ್ಕಾರದ ನಿರ್ಧಾರ ಸರಿಯೋ ತಪ್ಪೋ ಏನೇ ಆದರೂ ಅದನ್ನು ಜಾರಿ ಮಾಡಬೇಕಾಗಿರುವುದು ಜಿಲ್ಲಾಧಿಕಾರಿಯೇ.

ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಲಿ:

ಅವರು ಯಾರನ್ನಾದರೂ ಸಿಎಂ ಮಾಡಲಿ. ಅದು ಅವರಿಗೆ ಬಿಟ್ಟ ವಿಚಾರ. ನಾವು ವಿರೋಧ ಪಕ್ಷದಲ್ಲಿದ್ದೇವೆ.’

Leave a Reply

Your email address will not be published. Required fields are marked *