ರಾಣೆಬೆನ್ನೂರು:
ರೈತರು ಬೆಳೆದಿರುವ ಹಣ್ಣು, ಹೂವು, ತರಕಾರಿ ಬೆಳೆಯನ್ನು ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
‘ಕೋವಿಡ್ ವಿಚಾರವಾಗಿ ಪಕ್ಷದ ನಾಯಕರು ಜನರಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂದು ಪರಿಶೀಲಿಸಲು ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇನೆ. ಹುಬ್ಬಳ್ಳಿ- ಧಾರವಾಡಕ್ಕೆ ಭೇಟಿ ನೀಡಿ, ರೈತರು, ಸವಿತಾ ಸಮಾಜ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೀದಿ ವ್ಯಾಪಾರಿಗಳು, ಚಾಲಕರು, ಅಮಾಲಿಗಳು ಎಲ್ಲ ವರ್ಗದವರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದ್ದೇನೆ. ರಾಣೆಬೆನ್ನೂರಿನಲ್ಲಿ ಆಹಾರ ಕಿಟ್ ಹಂಚಿದ್ದು, ನಮ್ಮ ನಾಯಕರು ಉತ್ತಮ ಸೇವೆ ಮಾಡುತ್ತಿದ್ದಾರೆ.
ನಾನು ಯಾರನ್ನೂ ದೂರಲು ಬಂದಿಲ್ಲ. ನನ್ನ ಪ್ರಕಾರ ಪಕ್ಷದ ಪರವಾಗಿ 200ಕ್ಕೂ ಹೆಚ್ಚು ಆಂಬುಲೆನ್ಸ್ ಓಡಾಡುತ್ತಿವೆ. 2ರಂದು ಎಐಸಿಸಿ ಸಭೆ ನಡೆಯಲಿದ್ದು, ಎಲ್ಲೆಲ್ಲಿ ಎಷ್ಟು ಸೇವೆ ನೀಡಲಾಗಿದೆ ಎಂದು ಪಟ್ಟಿ ನೀಡುತ್ತೇನೆ.
ಬೆಳಗ್ಗೆ ರೈತರನ್ನು ಭೇಟಿ ಮಾಡಿದೆ. ಅಲ್ಲಿನ ರೈತರಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಲು ಗೊತ್ತಿಲ್ಲ. ಕಳೆದ ವರ್ಷದ ಪರಿಹಾರ ಇನ್ನೂ ತಲುಪಿಲ್ಲ. ಸರ್ಕಾರ ಕಣ್ಣೊರೆಸಲು ಪರಿಹಾರ ಘೋಷಿಸಿದೆ.
ಕೆ.ಜಿಗೆ 40ರೂ.ಗೆ ಮಾರುತ್ತಿದ್ದ ಹಸಿಮೆಣಸಿನಕಾಯಿ ಈಗ ಒಂದೆರಡು ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅವರ ಬೆಳೆಯನ್ನು ಬೆಂಬಲ ಬೆಲೆ ಕೊಟ್ಟು ಖರೀದಿಸುತ್ತಿಲ್ಲ.
ಹೀಗಾಗಿ ರೈತರು ಬೆಳೆದ ಹೂವು, ತರಕಾರಿಯನ್ನು ಸರ್ಕಾರವೇ ಖರೀದಿ ಮಾಡಬೇಕು. ಇಲ್ಲ ರೈತರು ತಮ್ಮ ಬೆಳೆ ಮಾರಲು ಕನಿಷ್ಠ 8 ತಾಸು ಕಾಲಾವಕಾಶ ನೀಡಿ. ಕೋವಿಡ್ ಸಮಯದಲ್ಲಿ ಸರ್ಕಾರ ರೈತರನ್ನು ರಕ್ಷಿಸಬೇಕು. ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ಎಲ್ಲರಿಗೂ ಲಸಿಕೆ ನೀಡಲು ಆಗಿಲ್ಲ. ಪ್ರತಿ ಮನೆಗೂ ಹೋಗಿ ಜನರು ಲಸಿಕೆಗೆ ಆನ್ಲೈನ್ ನೋಂದಣಿ ಮಾಡಿಸಬೇಕು ಅಂತಾ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ.
ನಾವು ₹100 ಕೋಟಿ ಕಾರ್ಯಕ್ರಮ ರೂಪಿಸಿದ್ದೇವೆ. ಅದಕ್ಕೆ ಸರ್ಕಾರ ಅನುಮತಿ ನೀಡಲಿ. ನಾವೆಲ್ಲ ಜನರಿಗೆ ಲಸಿಕೆ ಕೊಟ್ಟು ಜೀವ ಉಳಿಸಬೇಕು. ಆಗ ಜಾಗತಿಕ ಟೆಂಡರ್ ಅಂದ್ರು, ಈಗ ಇಲ್ಲ ಅಂತಿದ್ದಾರೆ.
ನಮ್ಮ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ದೇಸಾಯಿ ಅವರು ಆಕ್ಸಿಜನ್ ಸಿಗದೆ ಮೃತರಾಗಿದ್ದಾರೆ. ನಾನು ಅವರ ಮನೆಗೆ ಹೋದಾಗ ಆತನ ಜತೆ ಐವರು ಜನ ಆಕ್ಸಿಜನ್ ಇಲ್ಲದೆ ಕೋನೆಯುಸಿರೆಳೆದ ವಿಚಾರ ತಿಳಿಯಿತು. ಈ ರೀತಿ ರಾಜ್ಯದಲ್ಲಿ ಸಾವಿರಾರು ಜನ ಆಕ್ಸಿಜನ್, ಔಷಧಿ ಇಲ್ಲದೆ ಸತ್ತಿದ್ದಾರೆ.
ರಾಜ್ಯದೆಲ್ಲೆಡೆ ಹೋರಾಟ:
ರಮೇಶ್ ಜಾರಕಿಹೊಳಿ ಅವರು ಪ್ರಕರಣದಿಂದ ಹೊರಬರುತ್ತಾರೆ ಅಂತಾ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಏನೇನಾಗುತ್ತಿದೆ ಅಂತಾ ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ವಿಚಾರವಾಗಿ ಇಡೀ ರಾಜ್ಯದುದ್ದಗಲಕ್ಕೆ ಹೋರಾಟ ಸ್ವರೂಪದ ಬಗ್ಗೆ ನಂತರ ಹೇಳುತ್ತೇನೆ. ಇದು ವ್ಯಕ್ತಿಯ ವಿಚಾರವಲ್ಲ. ದೇಶದ ಕಾನೂನು, ಹೆಣ್ಣಿನ ರಕ್ಷಣೆ ವಿಚಾರ.
ಲಂಚ ಹೊಡೆಯುವುದಕ್ಕೆ ಸಹಕಾರ ಕೊಡಬೇಕಾ?
ಸರ್ಕಾರ ದೀಪ ಹಚ್ಚಿ ಅಂದಾಗ, ಚಪ್ಪಾಳೆ ಹೊಡಿ ಅಂದಾಗ, ಅವರ ನಿರ್ಧಾರವನ್ನು ಪಾಲಿಸಿಲ್ಲವೇ? ಇನ್ನೇನು ಸಹಕಾರ ಕೊಡಬೇಕು? ಅವರು ಲಂಚ ಹೊಡೆಯಲು, ಬೆಡ್, ಲಸಿಕೆ ಹಗರಣಕ್ಕೆ, ಔಷಧಿ, ಆಕ್ಸಿಜನ್ ನೀಡದಿರುವುದಕ್ಕೆ ಸಹಕಾರ ನೀಡಬೇಕಾ?